ಕರುನಾಡು ಘರ್ಜನೆ ಸುದ್ದಿ ಕೊಪ್ಪಳ:ಅ.24. ನಗರದ ಸಿರಸಪ್ಪಯ್ಯನ ಮಠದ ಬಳಿಯಿಂದ ಹುಲಿಕೆರೆಗೆ ಸಂಪರ್ಕ ಕಲ್ಪಿಸುವ ನೂತನ ಸಿಸಿ ರಸ್ತೆಯಲ್ಲಿ ಶಾಲಾ ಮಕ್ಕಳು, ಭಕ್ತಾದಿಗಳು ಹಾಗೂ ಸಾರ್ವಜನಿಕರ ಜೀವ ರಕ್ಷಣೆಗಾಗಿ ತಕ್ಷಣವೇ ವೇಗ ನಿಯಂತ್ರಕ (ಹಂಪ್ಸ್) ಗಳನ್ನು ನಿರ್ಮಿಸಬೇಕೆಂದು ಆಗ್ರಹಿಸಿ ಶನಿವಾರ ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್ ನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜೀವಕ್ಕೆ ಕಂಟಕವಾದ ರಸ್ತೆ:
ಸದರಿ ರಸ್ತೆ ಮಾರ್ಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೌಲಾನಾ ಆಜಾದ್ ಕರ್ನಾಟಕ ಪಬ್ಲಿಕ್ ಶಾಲೆ, ದೇವಸ್ಥಾನ, ಮಸೀದಿ ಹಾಗೂ ಖಬರಸ್ಥಾನಗಳಿದ್ದು, ನಿತ್ಯ ನೂರಾರು ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಸಂಚರಿಸುತ್ತಾರೆ. ರಸ್ತೆ ನೂತನವಾಗಿ ಸಿಸಿ ರಸ್ತೆಯಾಗಿ ಅಭಿವೃದ್ಧಿಗೊಂಡ ನಂತರ ವಾಹನ ಸವಾರರು ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದು, ನಿರಂತರ ಅಪಘಾತಗಳಿಗೆ ಕಾರಣವಾಗಿದೆ.
ಜನಪ್ರತಿನಿಧಿಗಳ, ಅಧಿಕಾರಿಗಳ ನಿರಾಸಕ್ತಿ:
ಈ ಕುರಿತು ಸ್ಥಳೀಯ ಶಾಸಕ ಕೆ.ರಾಘವೇಂದ್ರ ಬಿ. ಹಿಟ್ನಾಳ್ ಅವರ ಗಮನಕ್ಕೆ ತಂದಾಗ, ಅವರು ಮೂರು ದಿನಗಳಲ್ಲಿ ಹಂಪ್ಸ್ ನಿರ್ಮಿಸಲು ಭರವಸೆ ನೀಡಿದ್ದರು. ಆದರೆ ಮೂರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತ ಗುತ್ತಿಗೆದಾರರು ಹಾಗೂ ಸ್ಥಳೀಯ ಆಡಳಿತ ಕೂಡ ಸಾರ್ವಜನಿಕರ ಸುರಕ್ಷತೆಯನ್ನು ಕಡೆಗಣಿಸಿದೆ ಎಂದು ಯುವಕರು ತೀವ್ರ ನಿರಾಶೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೌರಾಯುಕ್ತರಿಗೆ ಪಿಎಸ್‌ಐ ಸೂಚನೆ:
ಸಾರ್ವಜನಿಕರ ಮನವಿ ಸ್ವೀಕರಿಸಿದ ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್ ನಾಯಕ್ ಅವರು ತಕ್ಷಣವೇ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರ್ ಅವರಿಗೆ ದೂರವಾಣಿ ಕರೆ ಮಾಡಿ, ರಸ್ತೆಯಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ಮಿಸಲು ಸೂಚಿಸಿದರು. ರಜೆಯ ನಂತರ ಖುದ್ದಾಗಿ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಮಂಜುನಾಥ ಗುಂಡೂರ್ ಭರವಸೆ ನೀಡಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಿರಸಪ್ಪಯ್ಯನ ಮಠದ ಬಡಾವಣೆಯ ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷ ಬಾಬು ಸಾಬ್ ಮಕಾಂದಾರ್, ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ಸಾಮಾಜಿಕ ಕಾರ್ಯಕರ್ತರಾದ ನೂರ್ ಪಾಷಾ ಆರಗಂಜಿ, ಆರಿಫ್ ಮಕಾಂದಾರ್, ಜಾಕಿರ್ ಕಮಾನ್ ಬೀಡಿ, ಸಖ್ಲೈನ್ ಸೈಯದ್, ಸಾಧಿಕ್ ಬಂಗಾಳಿ, ಪಾಶಾ ಸಿಕ್ಕಲ್ಗಾರ್, ಮಹೆಬೂಬ್ ಕಮಲಾಪುರ್, ಇಮ್ರಾನ್ ಆರಗಂಜಿ ಸೇರಿದಂತೆ ಬಡಾವಣೆಯ ಯುವಕರು ಉಪಸ್ಥಿತರಿದ್ದರು.