ಕರುನಾಡು ಘರ್ಜುನೆ ಸುದ್ದಿ ಹಾವೇರಿ ಜಿಲ್ಲೆ ಶಿಗ್ಗಾಂವ–ಸವಣೂರು, ಜುಲೈ 6: ಶಿಗ್ಗಾಂವ–ಸವಣೂರು ವಿಧಾನಸಭಾ ಕ್ಷೇತ್ರದ ಹುಲಗೂರ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಹೆಸ್ಕಾಂ ನಿಗಮದ ಅಧ್ಯಕ್ಷರು ಹಾಗೂ ಜನಪ್ರಿಯ ಮಾಜಿ ಶಾಸಕ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ ಅವರ ನೇತೃತ್ವದಲ್ಲಿ ವಿಶೇಷ ಮತದಾರರ ತೀವ್ರ ಪರಿಷ್ಕರಣೆ (SIR) ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೈಯದ್ ಅಜೀಮ್‌ಪೀರ್ ಖಾದ್ರಿ ಅವರು, ಮತದಾರರ ಪಟ್ಟಿಯಲ್ಲಿರುವ ಹೆಸರು, ವಿಳಾಸ ಹಾಗೂ ಇತರೆ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಎನ್ಯೂಮರೇಶನ್ (Enumeration) ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಪ್ರತಿಯೊಬ್ಬರೂ ಜಾಗೃತಿಯಿಂದ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಅಮೂಲ್ಯ ಹಕ್ಕಾಗಿದ್ದು, ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅವರು ಹೇಳಿದರು.
ಗ್ರಾಮದ ಮನೆಮನೆಗೆ ತಲುಪಿ SIR ಕುರಿತು ಅರಿವು ಮೂಡಿಸುವ ಮೂಲಕ ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತವಾಗಿಸಲು ಸಹಕರಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಹಿರಿಯ ಮುಖಂಡರು, ಮತದಾರರು, ಮಹಿಳೆಯರು, ಯುವಕರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.