ಕರುನಾಡು ಘರ್ಜನೆ ಸುದ್ದಿ ಕೊಪ್ಪಳ:ಜು.13.ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಗುಜರಿ ಅಂಗಡಿಯೊಂದಕ್ಕೆ ಸರ್ಕಾರಿ ಶಾಲಾ ಕಲಿಕಾ ಬಲವರ್ಧನೆ ಪಠ್ಯಪುಸ್ತಕಗಳನ್ನು ಮಾರಾಟ ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ತನಿಖೆ ನಡೆಸಿ 3-4 ದಿನಗಳಲ್ಲಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶೇಖರ್ ಹೊರಪೇಟೆ ಅವರು ವಿಶೇಷ ತಂಡ ರಚಿಸಿ ಆದೇಶಿಸಿದ್ದಾರೆ.
“ಘಟನೆಯ ವಿವರ:”
ಕಳೆದ ಶನಿವಾರ ಸಂಜೆ ರೈಲ್ವೆ ನಿಲ್ದಾಣದ ರಸ್ತೆಯ ಗುಜರಿ ಅಂಗಡಿಯೊಂದರಲ್ಲಿ ಶಾಲಾ ಪುಸ್ತಕಗಳನ್ನು ಹಾಕಿರುವುದರ ಕುರಿತು ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷರಾದ ಎಸ್.ಎ. ಗಫಾರ್. ಗೌರವ ಅಧ್ಯಕ್ಷ ಬಸವರಾಜ್ ಶೀಲವಂತರ್ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಅವರು ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ ಅವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದರು.
ದೂರಿಗೆ ತಕ್ಷಣ ಸ್ಪಂದಿಸಿದ ಬಿಇಓ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ವೈಶಂಪಾಯನ ಹಾಗೂ ಸದಾನಂದ ಭಾವಿಮನಿ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದರು. ಅಧಿಕಾರಿಗಳು ಗುಜರಿ ಅಂಗಡಿಯಲ್ಲಿದ್ದ ಪುಸ್ತಕಗಳನ್ನು ತೂಕ ಮಾಡಿ, ಸುಮಾರು 99 ಕೆಜಿ ತೂಕದ ಕಲಿಕಾ ಬಲವರ್ಧನೆ ಸರ್ಕಾರಿ ಪಠ್ಯಪುಸ್ತಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
“ಸಮಗ್ರ ತನಿಖೆಗೆ ಆಗ್ರಹ:”
ಈ ಸಂಬಂಧ ಸೋಮವಾರ ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್ ಹಾಗೂ ಗೌರವಾಧ್ಯಕ್ಷ ಬಸವರಾಜ್ ಶೀಲವಂತರ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಿಇಓ ಶೇಖರ್ ಹೊರಪೇಟೆ ಅವರನ್ನು ಭೇಟಿಯಾಗಿ ಚರ್ಚಿಸಿದರು. ಬಡ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಸರ್ಕಾರಿ ಪುಸ್ತಕಗಳು ಗುಜರಿ ಪಾಲಾದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ ಅವರು, “ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ತನಿಖಾ ತಂಡವನ್ನು ರಚಿಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವರದಿ ಬಂದ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತಂದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಭರವಸೆ ನೀಡಿದರು.