ಕರುನಾಡು ಘರ್ಜುನೆ ಸುದ್ದಿ ಗದಗ, ಜುಲೈ 24:ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ವಾಸವಾಗಿದ್ದ ಸಾರ್ವಜನಿಕ ಆರೋಗ್ಯ (MPH) ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ಅವರು ಶುಕ್ರವಾರ ರಾತ್ರಿ ದುರದೃಷ್ಟವಶಾತ್ ನಿಧನರಾಗಿದ್ದಾರೆ.
ರಾತ್ರಿ ಸುಮಾರು 8.30 ಗಂಟೆಯ ನಂತರ ತಮ್ಮ ಕೊಠಡಿಗೆ ತೆರಳಿದ್ದ ವಿದ್ಯಾರ್ಥಿನಿಯವರು, ರಾತ್ರಿ 11.00 ಗಂಟೆಯಾದರೂ ಕೊಠಡಿಯ ಬಾಗಿಲು ತೆರೆಯದೇ ಹಾಗೂ ಊಟಕ್ಕೂ ಹಾಜರಾಗದ ಹಿನ್ನೆಲೆಯಲ್ಲಿ ಸಹಪಾಠಿ ವಿದ್ಯಾರ್ಥಿನಿಯರಿಗೆ ಅನುಮಾನ ಉಂಟಾಯಿತು. ತಕ್ಷಣವೇ ವಸತಿ ನಿಲಯದ ವಾರ್ಡನ್ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.
ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಹಾಸ್ಟೆಲ್ ವಾರ್ಡನ್ ಮತ್ತು ಹಾಸ್ಟೆಲ್ನ ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ಕೊಠಡಿಯ ಬಾಗಿಲು ತೆರೆದು ಪರಿಶೀಲಿಸಿದಾಗ ಸದರಿ ವಿದ್ಯಾರ್ಥಿಯು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದರು. ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜೀವಚಿಹ್ನೆಗಳನ್ನು ಪರಿಶೀಲಿಸಿದ ಬಳಿಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸ್ ಅಧಿಕಾರಿಗಳ ಅನುಮತಿಯೊಂದಿಗೆ ವಿದ್ಯಾರ್ಥಿನಿಯನ್ನು ತಕ್ಷಣ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಘಟನೆಯ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಧನದ ನಿಖರ ಕಾರಣವು ಪೊಲೀಸ್ ತನಿಖೆಯ ಬಳಿಕವೇ ತಿಳಿದುಬರಬೇಕಾಗಿದೆ.
ವಿದ್ಯಾರ್ಥಿನಿಯ ಅಕಾಲಿಕ ನಿಧನವು ವಿಶ್ವವಿದ್ಯಾಲಯ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದ್ದು, ಕುಲಪತಿಗಳು, ಅಧಿಕಾರಿಗಳು, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಕಳೆದುಕೊಂಡಿರುವುದು ವಿಶ್ವವಿದ್ಯಾಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ನಿಧನದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಶೋಕಾಚರಣೆ ನಡೆಸಿ ಮೃತರ ಗೌರವಾರ್ಥ ಎಲ್ಲಾ ಶೈಕ್ಷಣಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅಗಲಿದ ವಿದ್ಯಾರ್ಥಿನಿಯ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ವಿಶ್ವವಿದ್ಯಾಲಯ ಪ್ರಾರ್ಥಿಸಿದೆ.