ಕರುನಾಡು ಘರ್ಜನೆ ಸುದ್ದಿ ಗದಗ, : ಕರ್ನಾಟಕ ರಾಜ್ಯದ ಗೌರವಾನ್ವಿತ ಉಪ ಲೋಕಾಯುಕ್ತರ ಸಮ್ಮುಖದಲ್ಲಿ ಗದಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ದೂರುಗಳ ವಿಚಾರಣೆ ಹಾಗೂ ವಿವಿಧ ಪ್ರಕರಣಗಳ ವಿಲೇವಾರಿ ಕುರಿತು ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಅರ್ಜಿದಾರರು ಮತ್ತು ಎದುರುದಾರರು ಭಾಗವಹಿಸಿ ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸಿದರು.
ಸಭೆಯ ಸಂದರ್ಭದಲ್ಲಿ ಕೆಲ ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಸಭೆಯಲ್ಲಿ ಹಾಜರಿದ್ದ ಕೆಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಮೊಬೈಲ್ ಫೋನಿನಲ್ಲಿ ಫುಲ್ ಬಿಸಿ ಇದ್ದರು. ಅನಗತ್ಯ ಗೊಂದಲ ಮತ್ತು ತೊಂದರೆ ಉಂಟಾಯಿತು ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ದೂರಿನ ಪ್ರಕಾರ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆಯೋಜಿಸಲಾದ ಸಭೆಯಲ್ಲಿಯೇ ಅಧಿಕಾರಿಗಳು ಸಾರ್ವಜನಿಕರ ಸಂಪರ್ಕಕ್ಕೆ ಸುಲಭವಾಗಿ ಲಭ್ಯವಾಗದಿರುವುದು ಪ್ರಶ್ನೆಗೆ ಕಾರಣವಾಗಿದೆ. ಇಂತಹ ಸಭೆಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕೆಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಬಾಕಿ ಉಳಿದಿರುವ ದೂರುಗಳು ಮತ್ತು ಪ್ರಕರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಪ್ರಕರಣಗಳ ವಿಲೇವಾರಿಯನ್ನು ತ್ವರಿತಗೊಳಿಸುವಂತೆ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ನಿಗದಿತ ಅವಧಿಯೊಳಗೆ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಭೆಗೆ ಹಾಜರಾಗುವ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಮರ್ಪಕ ಸಂಪರ್ಕ ಕಾಯ್ದುಕೊಂಡು, ಪಾರದರ್ಶಕ ಹಾಗೂ ಜವಾಬ್ದಾರಿಯುತ ಆಡಳಿತ ನೀಡಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ.