ಕರುನಾಡು ಘರ್ಜನೆ ಸುದ್ದಿ ಕೊಪ್ಪಳ:ಸೆ.01. ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ನಿಷೇಧಿತ ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಮಾಗಿಸಿದ ಅಪಕ್ವ (ಹಸಿ) ಬಾಳೆಹಣ್ಣುಗಳನ್ನು ವಿತರಿಸಲಾಗುತ್ತಿದ್ದು,ತಕ್ಷಣವೇ ತಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ‘ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ’ಯು ಮಂಗಳವಾರ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಚುನಾವಣಾ ಶಾಖಾ ತಹಶೀಲ್ದಾರ್ ರವಿ ಕುಮಾರ್ ವಸ್ತ್ರದ ಸೇರಿದಂತೆ ವಿವಿಧ ಉನ್ನತಾಧಿಕಾರಿಗಳಿಗೆ ಗಂಭೀರ ಸ್ವರೂಪದ ಮನವಿ ಸಲ್ಲಿಸಿ ಆಗ್ರಹಿಸಿದೆ.
ಮನವಿಯಲ್ಲಿ ಕೃತಕವಾಗಿ ಮಾಗಿಸಲು ಬಳಸುವ ‘ಕ್ಯಾಲ್ಸಿಯಂ ಕಾರ್ಬೈಡ್’ ಹಾಗೂ ಎಥೇಲ್ ರಾಸಾಯನಿಕಗಳಲ್ಲಿ ಆರ್ಸೆನಿಕ್ ಮತ್ತು ಫಾಸ್ಟೈನ್‌ನಂತಹ ತೀವ್ರ ವಿಷಕಾರಿ ಅಂಶಗಳಿರುತ್ತವೆ. ಇವುಗಳ ಶಾಲಾ ಮಕ್ಕಳು ಸೇವನೆಯಿಂದ ವಾಂತಿ, ಭೇದಿ, ತಲೆಸುತ್ತು, ಕರುಳಿನ ಹುಣ್ಣು (Ulcers) ಹಾಗೂ ನರಮಂಡಲದ ಹಾನಿ ಉಂಟಾಗುವುದಲ್ಲದೆ, ಭವಿಷ್ಯದಲ್ಲಿ ಕ್ಯಾನ್ಸರ್, ಯಕೃತ್ತು (Liver) ಮತ್ತು ಮೂತ್ರಪಿಂಡಗಳ ವೈಫಲ್ಯಕ್ಕೆ ದಾರಿಮಾಡಿಕೊಡುತ್ತದೆ. ಹೊರನೋಟಕ್ಕೆ ಹಳದಿಯಾಗಿ ಕಂಡುಬಂದರೂ ಒಳಭಾಗದಲ್ಲಿ ಹಸಿಯಾಗಿಯೇ ಇರುವ ಈ ಬಾಳೆಹಣ್ಣುಗಳು ಬಡ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಪ್ರಮುಖ ಬೇಡಿಕೆಗಳು ಹಾಗೂ ಕಾನೂನಾತ್ಮಕ ಉಲ್ಲಂಘನೆಗಳು:
ಕಾನೂನು ಉಲ್ಲಂಘನೆ: ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯು FSSAI ಕಾಯ್ದೆ 2006 (ಸೆಕ್ಷನ್ 44) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಜೊತೆಗೆ ಇದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಹಾಗೂ ಸಂವಿಧಾನದ ವಿಧಿ ೨೧ (ಜೀವಿಸುವ ಹಾಗೂ ಸುಕ್ಷೇಮ ಆಹಾರದ ಮೂಲಭೂತ ಹಕ್ಕು)ರ ನೇರ ಉಲ್ಲಂಘನೆಯಾಗಿದೆ.
ತಕ್ಷಣದ ತಪಾಸಣೆ: ಆಹಾರ ಸುರಕ್ಷತಾ ಅಧಿಕಾರಿಗಳು (Food Safety Officers) ತಕ್ಷಣವೇ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಬೇಕು.
ಕ್ರಿಮಿನಲ್ ಪ್ರಕರಣ: ವಿಷಪೂರಿತ ಹಣ್ಣುಗಳನ್ನು ಪೂರೈಸುವ ವ್ಯಾಪಾರಿಗಳ ಪರವಾನಗಿ ರದ್ದುಗೊಳಿಸಿ, ಅವರ ವಿರುದ್ಧ FSSAI ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕು.
ಜವಾಬ್ದಾರಿ ನಿಗದಿ: ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ಮಾತ್ರ ವಿತರಿಸಬೇಕು. ಕೃತಕವಾಗಿ ಮಾಗಿಸಿದ ಹಣ್ಣುಗಳನ್ನು ಖರೀದಿಸುವ ಶಾಲಾ ಮುಖ್ಯೋಪಾಧ್ಯಾಯರನ್ನೂ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕು.
ಈ ಮನವಿಯನ್ನು ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ.ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಪಾತ್ರೋಟಿ, ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮಖಬೂಲ್ ರಾಯಚೂರು.ಹಾಗೂ ವಿದ್ಯಾರ್ಥಿ ಸಂಘಟನೆಯ ನಾಯಕರಾದ ಸಂಘರ್ಷ ಬಿ.ಶೀಲವಂತರ್, ಆದಿತ್ಯ ಟಿ.ಪಾತ್ರೋಟಿ ಪ್ರಮುಖರು ಒಗ್ಗೂಡಿ ಬೆಂಬಲಿಸಿದ್ದು, ಮಕ್ಕಳ ಜೀವದ ಜೊತೆ ಆಟವಾಡುತ್ತಿರುವ ರಾಸಾಯನಿಕದಿಂದ ಮಾಗಿಸಿದ ಬಾಳೆಹಣ್ಣುಗಳನ್ನು ಮಾರುವವರ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.