ಕರುನಾಡು ಘರ್ಜುನೆ ಸುದ್ದಿ ಮುಂಡರಗಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆ: ₹4.40 ಲಕ್ಷ ಮೌಲ್ಯದ ಅಕ್ಕಿ ಜಪ್ತಿ
ಕ್ಯಾಂಟರ್ ಲಾರಿಯಲ್ಲಿ ಸುಮಾರು 200 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ಸಾಗಾಟ; ಚಾಲಕ ವಶಕ್ಕೆ
ಮುಂಡರಗಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕ್ಯಾಂಟರ್ ಲಾರಿಯಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಮುಂಡರಗಿ ಪೊಲೀಸರು ಪತ್ತೆಹಚ್ಚಿದ್ದು, ಸುಮಾರು ₹4.40 ಲಕ್ಷ ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಸೆಪ್ಟೆಂಬರ್ 2ರಂದು ಬೆಳಗ್ಗೆ ಸಾರ್ವಜನಿಕರಿಂದ 112 ತುರ್ತು ಸಹಾಯವಾಣಿಗೆ ಬಂದ ಮಾಹಿತಿಯ ಆಧಾರದ ಮೇಲೆ ಮುಂಡರಗಿ ಪೊಲೀಸ್ ಠಾಣೆಯ 112 ಸಿಬ್ಬಂದಿ ಮಕ್ಕುಂಪುರ ಗ್ರಾಮದ ದುರ್ಗಮ್ಮ ದೇವಿ ದೇವಸ್ಥಾನದ ಬಳಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪಡಿತರ ಅಕ್ಕಿ ಚೀಲಗಳನ್ನು ತುಂಬಿಕೊಂಡು ಸಾಗುತ್ತಿದ್ದ ಕೆಎ-01/ಎಎಂ-6176 ನೋಂದಣಿ ಸಂಖ್ಯೆಯ ಟಾಟಾ ಕ್ಯಾಂಟರ್ ಲಾರಿಯನ್ನು ತಡೆದು ನಿಲ್ಲಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮುಂಡರಗಿ ವಲಯದ ಆಹಾರ ನಿರೀಕ್ಷಕರು ಲಾರಿಯನ್ನು ಪರಿಶೀಲಿಸಿದಾಗ, ಪ್ಲಾಸ್ಟಿಕ್ ಚೀಲಗಳಲ್ಲಿ ಬಾಯಿ ಕಟ್ಟಲಾಗಿದ್ದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಪತ್ತೆಯಾಗಿದೆ. ಚೀಲಗಳನ್ನು ಎಣಿಕೆ ಮಾಡಿದಾಗ ಸುಮಾರು 380ರಿಂದ 400 ಚೀಲಗಳಿದ್ದು, ಪ್ರತಿ ಚೀಲದಲ್ಲಿ ಅಂದಾಜು 45ರಿಂದ 50 ಕೆ.ಜಿ. ಅಕ್ಕಿ ಇರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ಸುಮಾರು 200 ಕ್ವಿಂಟಲ್ ಅಕ್ಕಿ, ಅಂದಾಜು ₹4.40 ಲಕ್ಷ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.
ಲಾರಿ ಚಾಲಕನನ್ನು ವಿಚಾರಿಸಿದಾಗ, ತನ್ನ ಹೆಸರು ದೊಡ್ಡಬಸಪ್ಪ ತಂದೆ ವಿರುಪಣ್ಣ ಕಮತರ (40) ಎಂದು ತಿಳಿಸಿದ್ದು, ಅಕ್ರಮ ಪಡಿತರ ಅಕ್ಕಿ ಸಾಗಾಟದಲ್ಲಿ ವಿರೇಶ ಬಡಿಗೇರ ಹಾಗೂ ಬೂದಪ್ಪ ಕುರಿ ಎಂಬವರು ಸಹ ಭಾಗಿಯಾಗಿದ್ದಾರೆಂದು ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಅನ್ನಭಾಗ್ಯ ಯೋಜನೆಯ ಪಡಿತರ ಆಹಾರ ಧಾನ್ಯವನ್ನು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ಪಡಿತರ ವಿತರಣಾ ವ್ಯವಸ್ಥೆ (PDS) ಆದೇಶ-2016ರ ಸಂಬಂಧಿತ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಜಪ್ತಿ ಮಾಡಲಾದ ಅಕ್ಕಿಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಆಹಾರ ಇಲಾಖೆಯಿಂದ ಮನವಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.