ಕರುನಾಡು ಘರ್ಜುನೆ ಸುದ್ದಿ ಗದಗ, ಸೆ.5: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ತಮ್ಮ ಹೆಸರಿನಲ್ಲಿ ಖಾಲಿ ನಿವೇಶನ ಹೊಂದಿರುವ ಆಸ್ತಿ ಮಾಲೀಕರು ಕಡ್ಡಾಯವಾಗಿ ತಮ್ಮ ನಿವೇಶನದಲ್ಲಿರುವ ಗಿಡಗಂಟಿ, ಕಸ ಹಾಗೂ ಅನಗತ್ಯ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ನಗರಸಭೆ ಸೂಚನೆ ನೀಡಿದೆ.
ಖಾಲಿ ನಿವೇಶನಗಳ ಸ್ವಚ್ಛತೆ ಕಾಪಾಡುವ ಕುರಿತು ಈಗಾಗಲೇ ಪತ್ರಿಕೆಗಳು ಹಾಗೂ ನಗರಸಭೆಯ ಆಟೋಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರು ತಮ್ಮ ಹೆಸರಿನಲ್ಲಿರುವ ಖಾಲಿ ನಿವೇಶನಗಳನ್ನು ಸೆಪ್ಟೆಂಬರ್ 10ರೊಳಗಾಗಿ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು ಎಂದು ನಗರಸಭೆ ತಿಳಿಸಿದೆ. 
ನಿಗದಿತ ಅವಧಿಯೊಳಗೆ ನಿವೇಶನವನ್ನು ಸ್ವಚ್ಛಗೊಳಿಸದಿದ್ದಲ್ಲಿ, ನಗರಸಭೆಯೇ ಸ್ವಚ್ಛತಾ ಕಾರ್ಯ ಕೈಗೊಂಡು, ಅದರ ವೆಚ್ಚವನ್ನು ಸಂಬಂಧಿಸಿದ ಆಸ್ತಿ ಮಾಲೀಕರಿಂದ ಕೆಳಕಂಡ ದರದಂತೆ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಖಾಲಿ ನಿವೇಶನದ ಅಳತೆ ಹಾಗೂ ವಸೂಲಿ ಮೊತ್ತ:
20×30 ಅಡಿ – ₹15,000
30×40 ಅಡಿ – ₹20,000
30×50 ಅಡಿ – ₹22,000
40×60 ಅಡಿ – ₹25,000
ಇದಕ್ಕಿಂತ ಹೆಚ್ಚಿನ ಅಳತೆ – ₹30,000
ನಗರಸಭೆಯಿಂದ ಸ್ವಚ್ಛಗೊಳಿಸಿದ ನಂತರ ನಿಗದಿತ ಮೊತ್ತವನ್ನು ಪಾವತಿಸದೇ ಇದ್ದಲ್ಲಿ, ಸಂಬಂಧಿಸಿದ ಆಸ್ತಿ ಮಾಲೀಕರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಬಾಕಿ ಮೊತ್ತದ ವಸೂಲಿಗಾಗಿ ಆಸ್ತಿಯ ಮೇಲೆ ಕಾನೂನುಬದ್ಧವಾಗಿ ಭೂಜಾ/ಬೋಜಾ ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಎಚ್ಚರಿಸಿದೆ.
ಆದ್ದರಿಂದ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು ಯಾವುದೇ ದಂಡ ಹಾಗೂ ಕಾನೂನು ಕ್ರಮಕ್ಕೆ ಅವಕಾಶ ನೀಡದೆ, ನಿಗದಿತ ದಿನಾಂಕದೊಳಗೆ ತಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಕುರಿತು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.