ಕರುನಾಡು ಘರ್ಜನೆ ಸುದ್ದಿ ಧಾರವಾಡ ಅ.07: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದಿಂದ ವಿಧಾನ ಪರಿಷತ್ತ ಚುನಾವಣೆಗೆ ಸಂಬಂಧಿಸಿದಂತೆ, ಸೆಪ್ಟೆಂಬರ್ 29, 2026 ರಿಂದ ಅಕ್ಟೋಬರ್ 06, 2026 ವರೆಗೆ ಒಟ್ಟು 18 ಅಭ್ಯರ್ಥಿಗಳಿಂದ 36 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂದು ನಾಮಪತ್ರಗಳ ಪರಿಶೀಲನೆ ನಡೆದಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಅಕ್ಟೋಬರ್ 09, 2026 ಕೊನೆಯ ದಿನವಾಗಿರುತ್ತದೆ.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಮತ ಕ್ಷೇತ್ರದ ಚುನಾವಣಾಧಿಕಾರಿಯಾದ ಕೆ.ಎಮ್.ಜಾನಕಿ ಅವರು ಇಂದು ಅಕ್ಟೋಬರ್ 07 ರಂದು ನಾಮಪತ್ರಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹಾಗೂ ಚುನಾವಣಾ ವೀಕ್ಷಕರಾದ ಮನೋಜ ಜೈನ್ ಅವರು ಇದ್ದರು.
ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಉಮೇದುವಾರರಾದ ಹುಬ್ಬಳ್ಳಿಯ ಮೋಹನ ಲಿಂಬಿಕಾಯಿ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷ, ಗದಗ ಜಿಲ್ಲೆಯ ಸಂಕನೂರ ಎಸ್.ವಿ. ಅವರು ಭಾರತೀಯ ಜನತಾ ಪಾರ್ಟಿಗೆ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನೋಂದಾಯಿತ ರಾಜಕೀಯ ಪಕ್ಷಗಳ ಉಮೇದುವಾರರಾದ (ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ) ಹಾವೇರಿ ಜಿಲ್ಲೆಯ ನಿಶಾಂತ ಶಂಕರ ಬಂಕಾಪೂರ ಅವರು ಕರ್ನಾಟಕ ರಾಷ್ಟ್ರ ಸಮಿತಿ, ಧಾರವಾಡ ಜಿಲ್ಲೆಯ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಅವರು ಕಿತ್ತೂರ ಕಲ್ಯಾಣ ಕರ್ನಾಟಕ ಸೇನಾ, ಹಾವೇರಿ ಜಿಲ್ಲೆಯ ತಳವಾರ ಶಿವಕುಮಾರ ಅವರು ಜನತಾ ಚಳುವಳಿ ಭಾರತ ಪಕ್ಷಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಇತರೆ ಉಮೇದುವಾರರಾದ ಧಾರವಾಡ ಜಿಲ್ಲೆಯ ಅಬ್ದುಲ್ ಮನ್ನಾನ, ಹುಬ್ಬಳ್ಳಿಯ ಇಮ್ರಾನ ಕೂಡಲ, ಬೆಂಗಳೂರಿನ ಡಾ.ಜಿ.ಹೆಚ್.ಇಮ್ರಾಪೂರ, ಹಾವೇರಿ ಜಿಲ್ಲೆಯ ಉಮೇಶ ಕೃಷ್ಣಪ್ಪ ದೈವಜ್ಞ ಮತ್ತು ಆರ್.ಎಂ. ಕುಬೇರಪ್ಪ, ಶಿರಸಿಯ ಕೃಷ್ಣ ಎಚ್.ಬಳೆಗಾರ, ಧಾರವಾಡ ಜಿಲ್ಲೆಯ ಕಾಂತಕುಮಾರ ಆರ್., ಗದಗ ಜಿಲ್ಲೆಯ ಜಿಶಾನ ಡಿ.ಸಿರಸಂಗಿ, ಹಾವೇರಿ ಜಿಲ್ಲೆಯ ಜೀಶಾನ ಅಹ್ಮದಖಾನ ಪಠಾಣ, ಹುಬ್ಬಳ್ಳಿಯ ಬಸವರಾಜ ಶಂಕರಪ್ಪ ಕೊಟಗಿ, ಹಾವೇರಿ ಜಿಲ್ಲೆಯ ಸಲೀಮ ಮಹ್ಮದ್ ಹನೀಫ್ ಜವಳಿ ಮತ್ತು ಸುರೇಶ ಎಸ್. ಬಿಷ್ಟನಗೌಡರ, ಗದಗ ಜಿಲ್ಲೆಯ ಸಂತೋಷ ಮನೋಹರ ವೆರ್ಣೇಕರ್ ಅವರು ಪಕ್ಷೇತರಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲ ಉಮೇದುವಾರರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಮತ ಕ್ಷೇತ್ರದ ಚುನಾವಣಾಧಿಕಾರಿಯಾದ ಕೆ.ಎಮ್.ಜಾನಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.