ಕರುನಾಡು ಘರ್ಜನೆ ಸುದ್ದಿ ಗದಗ, ಜು.7 : ಬೇಜವಾಬ್ದಾರಿ ಆರೋಗ್ಯ ಇಲಾಖೆಯ ಆಡಳಿತದಿಂದಾಗಿ ಡೆಂಗ್ಯೂ ಜ್ವರಕ್ಕೆ 5 ವರ್ಷದ ಬಾಲಕ ಬಲಿಯಾಗಿದ್ದು ಜಿಲ್ಲೆಯ ಜನ ಆಕ್ರೋಶಗೊಳ್ಳಲು ಕಾರಣವಾಗಿದೆ. ಗದಗ ತಾಲೂಕಿನ ಶಿರುಂಜ ಗ್ರಾಮದ 5 ವರ್ಷದ ಕಂದ ಚಿರಾಯಿ ಹೊಸಮನಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿಯಾಗಿದ್ದಾನೆ.
ಗದಗ ತಾಲೂಕಿನ ಶಿರುಂಜ ಗ್ರಾಮದ ಚಿರಾಯಿ ಹೊಸಮನಿಯನ್ನು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಕಳೆದ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಿದಾಗಲೂ ಚಿಕಿತ್ಸೆ ಫಲಿಸದೆ ಇಂದು ಧಾರವಾಡದ ಆಸ್ಪತ್ರೆಯಲ್ಲಿ ಬಾಲಕ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಮೃತ ಬಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದರೆ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಮಧ್ಯೆ ಗದಗ ಜಿಲ್ಲಾ ಆರೋಗ್ಯ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳಿಗೆ, ಜಿಲ್ಲಾ ಆಡಳಿತ ವ್ಯವಸ್ಥೆಗೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಈಗಲಾದರು ಆರೋಗ್ಯ ಇಲಾಖೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕಿದೆ.