ಕರುನಾಡು ಘರ್ಜನೆ ಸುದ್ದಿ ಕೊಪ್ಪಳ, ಸೆ.10: ರಾಜ್ಯದಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಗಣೇಶ ಪ್ರತಿಷ್ಠಾಪನೆಯ ಸಮಯದಲ್ಲಿ ಮತ್ತು ವಿಸರ್ಜನೆ ವೇಳೆ ಅನೇಕ ಕಡೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಡಿಜೆ ಹಚ್ಚಿ ಗಣೇಶನ ಭಕ್ತರು ಕುಣಿದು ಕುಪ್ಪಳಿಸಿದ್ದಾರೆ. ಅದೇ ರೀತಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕೂಡ ಹಿಂದೂ ಮಹಾಗಣಪತಿ ಕಾಮನಕಟ್ಟೆ ಗೆಳೆಯರ ಬಳಗದಿಂದ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಈ ತಂಡ ಗ್ರಾಮದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಾ ಬಂದಿದೆ.
ಗಣೇಶ ವಿಗ್ರಹ ಮೆರವಣಿಗೆ ಕಾರ್ಯಕ್ರಮದ ಡಿಜೆಗೆ ಬ್ರೇಕ್
ಪ್ರತಿವರ್ಷ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿರುವ ಗ್ರಾಮದ ಜನರು, ಗಣೇಶ ಪ್ರತಿಷ್ಠಾಪನೆಯ ಸಮಯದಲ್ಲಿ ಮತ್ತು ವಿಸರ್ಜನೆಯ ಸಮಯದಲ್ಲಿ ಡಿಜೆ ತಂದು, ಇಡೀ ಗ್ರಾಮದ ಜನರು ಕುಣಿದು ಕುಪ್ಪಳಿಸುತ್ತಿದ್ದರು. ಆದ್ರೆ, ಡಿಜೆ ಹಚ್ಚಿದರೆ ಅದರ ಆನಂದ ಇರುವುದು ಕೇವಲ ನಾಲ್ಕೈದು ಗಂಟೆ ಮಾತ್ರ. ಆದ್ರೆ, ಇದನ್ನು ಹೊರತುಪಡಿಸಿ ಏನಾದರೂ ಸಮಾಜಮುಖಿ ಕೆಲಸ ಮಾಡೋಣ ಎಂದು ಗೆಳೆಯರ ಬಳಗದ ಸದಸ್ಯರು ನಿರ್ಧರಿಸಿದರು. ಅದರಂತೆ ಕಿನ್ನಾಳ ಗ್ರಾಮದಿಂದ ಕೊಪ್ಪಳ ನಗರಕ್ಕೆ ಹೋಗುವ ರಸ್ತೆ ದುರಸ್ಥಿಯನ್ನು ಮಾಡಲು ಮುಂದಾಗಿದ್ದು, ಇಂದು ಮುಂಜಾನೆಯಿಂದ ರಸ್ತೆ ದುರಸ್ಥಿ ಕೆಲಸವನ್ನು ಆರಂಭಿಸಿದ್ದಾರೆ.