ಕರುನಾಡು ಘರ್ಜನೆ ಸುದ್ದಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಇಂದು ಬೆಳ್ಳಂಬೆಳಗ್ಗೆ ತರಕಾರಿ ಕೊಂಡೊಯ್ತಿದ್ದ ಲಾರಿ ಪಲ್ಟಿಯಾಗಿ 10 ಮಂದಿ ಮೃ*ತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ದುರ್ಘಟನೆಯಲ್ಲಿ 16ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವೇಳೆ ಲಾರಿಯಲ್ಲಿ ಒಟ್ಟು 28 ಮಂದಿ ಪ್ರಯಾಣಿಸುತ್ತಿದ್ದರು. ಲಾರಿಯು ಸವಣೂರಿನಿಂದ ಕುಮಟಾಗೆ ತೆರಳುತ್ತಿತ್ತು. ನಸುಕಿನ ಜಾವ ಮಂಜು ಇದ್ದ ಹಿನ್ನೆಲೆಯಲ್ಲಿ ರಸ್ತೆ ಸರಿಯಾಗಿ ಕಾಣದಿದ್ದರಿಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಮೃತರೆಲ್ಲರು ಸವಣೂರ ಮೂಲದವರೆಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.