ಕರುನಾಡು ಘರ್ಜನೆ ಸುದ್ದಿ :ಮಂಡ್ಯ : ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸುವುದರ ಜತೆಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ವಂಚನೆ ಮಾಡಿದ ಆರೋಪದ ಮೇರೆಗೆ ನಕಲಿ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ . ಅಂತೆಯೇ ಈತನಿಂದ ನಕಲಿ ನೇಮಕಾತಿ ಪತ್ರ , ಗುರುತಿನ ಚೀಟಿ , ಟ್ಯಾಗ್ ಸೇರಿದಂತೆ ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ.
ತಾನೊಬ್ಬ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಹಲವರಿಂದ ಹಣ ಪಡೆದು ವಂಚಿಸಿದ್ದಾನೆ . ನಗರದ ಸಾಹುಕಾರ್ ಚನ್ನಯ್ಯ ಬಡಾವಣೆಯ ಎಸ್.ಕೆ. ಗಾಯತ್ರಿ ಎಂಬುವರ ಮಕ್ಕಳಿಗೆ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 14 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾನೆ . ಇದಲ್ಲದೆ ನೇತ್ರಾವತಿ ಎಂಬುವರ ಮಗನಿಗೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 12.24 ಲಕ್ಷ ರೂ.ಗಳನ್ನು ಪಡೆದಿದ್ದಾನೆ . ಇದೇ ರೀತಿ ಮತ್ತೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದಾರೆ . ಆರೋಪಿ ವೆಂಕಟೇಶ್ ತಾನು ವಿಧಾನಸೌಧದಲ್ಲಿ ಉನ್ನತ ದರ್ಜೆಯ ಅಧಿಕಾರಿಯಾಗಿದ್ದು , ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳು ತಮಗೆ ಪರಿಚಯವಿದ್ದಾರೆ . ಅವರೊಂದಿಗೆ ಮಾತುಕತೆ ನಡೆಸಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 30 ರಿಂದ 40 ಜನರಿಂದ ಹಣ ಪಡೆದು ವಂಚಿಸಿದ್ದಾನೆ . ಕೆಲವರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದು ಕೆಲಸಕ್ಕೆ ಸೇರಿಸುವುದಾಗಿ ಹೇಳಿ ವಾಪಸ್ ಕರೆತಂದಿದ್ದಾನೆ . ಅದೇ ರೀತಿ ಅಬಕಾರಿ ಇಲಾಖೆಗೂ ಕರೆದೊಯ್ದು ಎಲ್ಲೆಡೆ ಸುತ್ತಾಡಿಸಿ ಕೆಲಸಕ್ಕೆ ನಿಯೋಜಿಸುವುದಾಗಿ ಹೇಳಿ ಮತ್ತೆ ವಾಪಸ್ ಕರೆದೊಯ್ದಿದ್ದಾನೆ . ಈತನ ವಂಚನೆ ಬಗೆದಷ್ಟು ಬೆಳಕಿಗೆ ಬರುತ್ತಿದೆ ಎಂದು ಹೇಳಿದರು .
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿಯನ್ನು ಕೆಲವೊಂದು ದಾಖಲೆಗಳಲ್ಲಿ ಸ್ಕ್ಯಾನ್‌ನಿಂದ ನಕಲು ಮಾಡಿ ಅದನ್ನು ನೇಮಕಾತಿ ಪತ್ರದಲ್ಲಿ ಅಳವಡಿಸಿ ಸುಲಭವಾಗಿ ವಂಚಿಸಿದ್ದಾನೆ . ಮಂಡ್ಯ ಜಿಲ್ಲಾಧಿಕಾರಿ ಪರವಾಗಿ ಎಂಬ ಸಹಿಯನ್ನೂ ಮಾಡಿದ್ದಾನೆ . ಅದು ಯಾರದು ಎಂಬ ಬಗ್ಗೆ ಇನ್ನು ತನಿಖೆ ನಡೆಸುತ್ತಿದ್ದೇವೆ . ಇದೇ ರೀತಿ ಯಾವ್ಯಾವ ಇಲಾಖೆಗಳಲ್ಲಿ ವಂಚನೆ ಮಾಡಿದ್ದಾನೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ . ಆರೋಪಿ ಅಂದಾಜು 2 ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿರಬಹುದು . ಈತನ ಮನೆಯಲ್ಲಿ ಶೋಧ ನಡೆಸಿದಾಗ ಅಬಕಾರಿ ಇಲಾಖೆ , ವಾಣಿಜ್ಯ ತೆರಿಗೆ ಇಲಾಖೆ , ಕರ್ನಾಟಕ ಲೋಕಸೇವಾ ಆಯೋಗ , ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ಮಾಡಿರುವ ಬಗ್ಗೆ ಸೃಷ್ಠಿಸಿರುವ ನಕಲಿ ದಾಖಲಾತಿಗಳು , ಹಾಜರಾತಿ ಪುಸ್ತಕಗಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ . ಉದ್ಯೋಗ ಕೊಡಿಸುವುದಾಗಿ ನಂಬಿಸಿದ ವೆಂಕಟೇಶ ಹಲವರಿಂದ ನಗದು ರೂಪದಲ್ಲೇ ಹಣ ಪಡೆದಿದ್ದು , ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಡಿಜಿಟಲ್ ಪೇಮೆಂಟ್ ಪಡೆದಿದ್ದಾನೆ . ಈಗಾಗಲೇ ಆತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ . ಈತನ ಪತ್ನಿ ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದರೆಂಬ ಮಾಹಿತಿಯೂ ಲಭ್ಯವಾಗಿದ್ದು , ಈ ಬಗ್ಗೆಯೂ ನಾವು ನಿಗಾ ವಹಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ .
ಇಬ್ಬರು ಪೊಲೀಸರ ವಿರುದ್ಧ ತನಿಖೆ ಆರೋಪಿ ವೆಂಕಟೇಶ್ ಜತೆಗೆ ಶಾಮೀಲಾಗಿದ್ದಾರೆಂಬ ಆರೋಪದ ಮೇರೆಗೆ ಪೊಲೀಸ್ ಇಲಾಖೆಯ ಚಿಕ್ಕಯ್ಯ ಹಾಗೂ ಲೋಕೇಶ್ ಎಂಬುವರ ವಿರುದ್ಧ ಡಿವೈಎಸ್ಪಿ ಮೂಲಕ ತನಿಖೆ ನಡೆಸಲಾಗುತ್ತಿದೆ . ಪ್ರಕರಣದಲ್ಲಿ ಭಾಗಿಯಾಗಿದ್ದರೆಂಬ ಸುಳಿವು ಸಿಕ್ಕಲ್ಲಿ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ . ಪೊಲೀಸ್ ಇಲಾಖೆಯಲ್ಲೇ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರೂ ಆರೋಪಿ ವೆಂಕಟೇಶ್‌ನಿಂದ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆನ್ನಲಾಗಿದ್ದು , ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು . ಓದಿದ್ದು ಡಿಪ್ಲೊಮೊ , ಹೇಳಿದ್ದು ಕೆಇಎಸ್ ಆರೋಪಿ ವೆಂಕಟೇಶ್ ಡಿಪ್ಲೊಮೊ ವ್ಯಾಸಂಗ ಮಾಡಿದ್ದಾನೆ . ಯಾವುದೇ ಉದ್ಯೋಗವಿರಲಿಲ್ಲ . ಆದರೆ ತಾನು ಕೆಇಎಸ್ ಅಧಿಕಾರಿ ಎಂದು ಹೇಳಿಕೊಂಡಿದಲ್ಲದೆ , ಗುರುತಿನ ಚೀಟಿ ಮಾಡಿಸಿಕೊಂಡಿದ್ದನು . ಇದಲ್ಲದೆ ಎಫ್‌ಡಿಎ ಗುರುತಿನ ಚೀಟಿ ಇತ್ತು . ಕುತ್ತಿಗೆಗೆ ಹಾಕಿಕೊಳ್ಳುವ ಸರ್ಕಾರದ ಲೋಗೋ ಇರುವೆಂಕಟೇಶ್ ಟ್ಯಾಗ್‌ಗಳ ಬಂಡಲ್‌ಗಳನ್ನೇ ಇಟ್ಟುಕೊಂಡಿದ್ದನು .