ಕರುನಾಡು ಘರ್ಜನೆ ಸುದ್ದಿ : ಭವಾನಿ ನಗರದ ನಿವಾಸಿ ವೀರೇಶ್ ಶ್ರೀಕಾಂತ (29) ಕೊಲೆಯಾದ ರೌಡಿ ಶೀಟರ್. ಕೊಲೆ ಮಾಡಿದ ಆರೋಪದಲ್ಲಿ ಶಿವಾನಂದ ಕುಂಬಾರ ಸೇರಿ ಇತರರ ವಿರುದ್ಧ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸ ಮಾಡದೆ ಅಲೆದಾಡುತ್ತಿದ್ದ ವೀರೇಶ್, ಸೋಮವಾರ ರಾತ್ರಿ (ಮಾ.3) ರೆಸ್ಟೋರೆಂಟ್ ಒಂದರಲ್ಲಿ ಸಂಗನಬಸಪ್ಪ ಅವರ ಜತೆಗೆ ಮದ್ಯ ಕುಡಿಯುತ್ತಿದ್ದರು. ಶಿವಾನಂದ ಎಂಬಾತ ವೀರೇಶ್‌ಗೆ ಫೋನ್ ಕರೆ ಮಾಡಿ, ಪಾರ್ಟಿಗೆ ಬರುವಂತೆ ಆಹ್ವಾನಿಸಿದ್ದ. ಕೆಲ ಹೊತ್ತಿನ ಬಳಿಕ ರೆಸ್ಟೋರೆಂಟ್‌ಗೆ ಬಂದ ಶಿವಾನಂದ ಮತ್ತು ಆತನ ಇಬ್ಬರು ಸಂಗಡಿಗರು ಪಾರ್ಟಿ ಮಾಡಲು ವೀರೇಶ್‌ನನ್ನು ಕರೆದುಕೊಂಡು ಹೋದರು ಎಂದು ಮಾಹಿತಿ ನೀಡಿದರು.
ಮಂಗಳವಾರ ಬೆಳಿಗ್ಗೆ ಕಾಕಡೆ ಚೌಕ್‌ನ ಲಂಗರ್ ಹನುಮಾನ ದೇವಸ್ಥಾನ ಸಮೀಪದಲ್ಲಿ ವೀರೇಶ್ ಅವರ ಮೃತದೇಹ ರಕ್ತಸಿಕ್ತವಾಗಿ ಕಂಡುಬಂತು. ತಲೆಗೆ ಕಬ್ಬಿಣದ ರಾಡ್‌ನಿಂದ ಬಲವಾಗಿ ಹೊಡೆದಿದ್ದು, ಎಲ್ಲೆಡೆ ರಕ್ತ ಹರಿದಿತ್ತು. ಕೊಲೆಯಾದ ಸ್ಥಳದಲ್ಲಿ ಮೊಬೈಲ್, ಮದ್ಯದ ಬಾಟಲಿಗಳು, ಚಿಪ್ಸ್ ಪ್ಯಾಕೆಟ್‌ಗಳು, ಕಬ್ಬಿಣದ ರಾಡ್ ಬಿದ್ದಿದ್ದವು. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದ ನಡುವೆ ಕೊಲೆಯ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಎರಡು ಕೊಲೆ ಪ್ರಕರಣ ದಾಖಲು: ಕೊಲೆಯಾದ ವೀರೇಶ್ ವಿರುದ್ಧ 2022ರಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಸೇರಿ ಎರಡು ಪ್ರಕರಣಗಳಿದ್ದರೆ, ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿತ್ತು ಎನ್ನಲಾಗುತ್ತಿದೆ.
ಕೆಲವು ದಿನಗಳ ಹಿಂದೆಯಷ್ಟೇ ರೌಡಿಶೀಟರ್ ಪಟ್ಟಿಯನ್ನು ಪರಿಶೀಲಿಸಿದ ಪೊಲೀಸರು, ವೀರೇಶ್‌ಗೆ ಎಚ್ಚರಿಕೆಯೂ ನೀಡಿದ್ದರು. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಆದರೆ, ಜನರಿಗೆ ಬೆದರಿಕೆ ಹಾಕುತ್ತಿದ್ದಾಗಿ ಮೂಲಗಳು ತಿಳಿಸಿವೆ.
ಕಮಿಷನರ್ ಭೇಟಿ: ಸ್ಥಳಕ್ಕೆ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಎಸಿಪಿ ಡಿ.ಜಿ.ರಾಜಣ್ಣ, ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ, ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಸಂತೋಷ ತಟ್ಟೆಪಲ್ಲಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.
ವರದಿ :ಸಂಪಾದಕ್ ಯಾಸೀನಸಾಬ್ ಬೊದ್ಲೇಖಾನ್