ಕರುನಾಡು ಘರ್ಜನೆ ಸುದ್ದಿ : ಹೋಳಿ ಹಬ್ಬದಂದು ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಯುವಕನನ್ನು ಮೂವರು ಜನ ಕತ್ತು ಹಿಸುಕಿ ಹತ್ಯೆಗೈದ ಘಟನೆ ರಾಜಸ್ಥಾನದಲ್ಲಿ ನಡೆದಿದೆ .
ಬುಧವಾರ ಸಂಜೆ ದೌಸಾ ಜಿಲ್ಲೆಯ ರಾಲ್ವಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ . ಹತ್ಯೆಗೀಡಾದ ಯುವಕನನ್ನು ಹಂಸರಾಜ್ ಎಂದು ಗುರುತಿಸಲಾಗಿದೆ . ಹಂಸರಾಜ್ ಸ್ಥಳೀಯ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ . ಇಲ್ಲಿಗೆ ಬಂದ ಅಶೋಕ್ , ಬಬು ಮತ್ತು ಕಲುರಾಮ್ ಬಣ್ಣ ಬಳಿಯಲು ಯತ್ನಿಸಿದ್ದರು . ಈ ವೇಳೆ ಯುವಕ ನಿರಾಕರಿಸಿದ್ದಕ್ಕೆ ಮೂವರು ಆತನಿಗೆ ಬೆಲ್ಟ್ನಿಂದ ಹಲ್ಲೆ ನಡೆಸಿದ್ದರು . ಬಳಿಕ ಅದರಲ್ಲಿ ಒಬ್ಬ ಕತ್ತು ಹಿಸುಕಿ ಆತನನ್ನು ಹತ್ಯೆಗೈದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಅಗರ್ವಾಲ್ ತಿಳಿಸಿದ್ದಾರೆ .
ಹತ್ಯೆಯನ್ನು ಖಂಡಿಸಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಹಂಸರಾಜ್ ಅವರ ಶವವನ್ನು ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಿಸಿ ಪ್ರತಿಭಟನೆ ನಡೆಸಿದ್ದಾರೆ . ಮೃತನ ಕುಟುಂಬಕ್ಕೆ 50 ಲಕ್ಷ ರೂ . ಪರಿಹಾರ , ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಬೇಕು . ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ . ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಮೃತದೇಹವನ್ನು ಹೆದ್ದಾರಿಯಿಂದ ತೆಗೆದು , ಪ್ರತಿಭಟನೆ ಕೈಬಿಟ್ಟಿದ್ದಾರೆ .