ಕರುನಾಡು ಘರ್ಜನೆ ಸುದ್ದಿ ಬೆಳಗಾವಿಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು AIDSO ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೂ ಮುನ್ನವೇ ಪೊಲೀಸ್ ಇಲಾಖೆಯು ಅನುಮತಿ ನೀಡಿದ್ದಾಗಿಯೂ, ಏಕಾಏಕಿಯಾಗಿ ಅದನ್ನು ರದ್ದು ಪಡಿಸಿತ್ತು. ಹಾಗಿದ್ದರೂ ಸಹ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬರ ಹಕ್ಕಾಗಿದೆ. ಅದನ್ನು ಕಸಿಯಲು ಮುಂದಾಗಿರುವ ಕಾಂಗ್ರೆಸ್ ರಾಜ್ಯ ಸರ್ಕಾರದ ನಡೆಯು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ಸರ್ಕಾರದ ಈ ಧೋರಣೆಯನ್ನು ಖಂಡಿಸುತ್ತಾ, ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಬಾರದೆಂದು ನಗರದ ರಾಣಿ ಚೆನ್ನಮ್ಮ ವೃತ್ತದ ಬಳಿ ವಿವಿಧ ಹಳ್ಳಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಇಂದು ಪ್ರತಿಭಟನೆಯನ್ನು ನಡೆಸಿದರು.
ಕರ್ನಾಟಕ ರಾಜ್ಯದಲ್ಲಿ ‘ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) – ಮ್ಯಾಗ್ನೆಟ್ ಯೋಜನೆ’ ಯ ಮೂಲಕ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಮತ್ತು ವಿಲೀನಗೊಳಿಸುವ ರಾಜ್ಯ ಸರ್ಕಾರದ ನಡೆಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಕರ್ನಾಟಕ ರಾಜ್ಯ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸುತ್ತದೆ.
ರಾಜ್ಯದ ರಾಮನಗರದ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಕೆಪಿಎಸ್ ಶಾಲೆಯಡಿ 6 ಕಿಮೀ ವ್ಯಾಪ್ತಿಯೊಳಗಿನ 77, 82, 31, 100, 20 ಮತ್ತು 80 ವಿದ್ಯಾರ್ಥಿಗಳಿರುವ 6 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಈಗಾಗಲೇ ಆದೇಶ ನೀಡಲಾಗಿದೆ. ಇದು ಶಾಲೆಗಳನ್ನು ಮುಚ್ಚುವ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೇ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಕುರಿತಾಗಿ ಹೊರಡಿಸಿರುವ ಸರ್ಕಾರದ ನಡವಳಿಗಳು ಸ್ಪಷ್ಟವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದಾಗಿ ಉಲ್ಲೇಖಿಸಿವೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದಿನಾಂಕ 15, ಅಕ್ಟೋಬರ್ 2025 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳೊಂದಿಗೆ ‘1 ರಿಂದ 5 ಕಿಮೀ ವ್ಯಾಪ್ತಿಯ ಒಳಗಿನ ಚಿಕ್ಕ ಸರ್ಕಾರಿ ಶಾಲೆಗಳನ್ನು ಈ ಪ್ರಸ್ತಾಪಿತ ಕರ್ನಾಟಕಪಬ್ಲಿಕ್ ಶಾಲೆಗಳೊಂದಿಗೆ ಸುಲಲಿತವಾಗಿ ಸಮ್ಮಿಳಿತಗೊಳಿಸುವುದು.’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸರ್ಕಾರದ ಈ ಎಲ್ಲಾ ನಿರ್ದೇಶನಗಳು ಜಾರಿಯಾದಲ್ಲಿ ಕರ್ನಾಟಕದ ಸಾವಿರಾರು ಶಾಲೆಗಳುಮುಚ್ಚಲಿವೆ ಎಂಬ ಆತಂಕ ಕರ್ನಾಟಕದ ಜನತೆಯನ್ನು ಕಾಡುತ್ತಿವೆ. ವಿಲೀನದ ಪರಿಣಾಮವಾಗಿ, ಸಮುದಾಯ ಮತ್ತು ಹಳ್ಳಿಗಳ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ. ಇದರಿಂದ ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಹತ್ತಿರದ ನೆರೆಹೊರೆಯ ಶಾಲೆಗಳಿಗೆ ಪ್ರವೇಶ ಕಷ್ಟವಾಗುತ್ತದೆ ಮತ್ತು ಪ್ರಯಾಣದ ದೂರ, ಅಸುರಕ್ಷತೆ ಹೆಚ್ಚಳದಿಂದಾಗಿ, ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಶಾಲೆ ಬಿಡುವವರ ಸಂಖ್ಯೆ ಹೆಚ್ಚಳವಾಗುತ್ತದೆ.
ಅಲ್ಲದೇ, ಸಚಿವರು ವಿಲೀನದ ನೆಪದಲ್ಲಿ ಮುಚ್ಚುವ ಶಾಲಾ ಕಟ್ಟಡಗಳನ್ನು ಸಂಘ ಸಂಸ್ಥೆಗಳ ಇತರ ಕೆಲಸಗಳಿಗೆ ವಿನಿಯೋಗಿಸಲು ಮುಂದಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸುವುದಾಗಿ ಹೇಳಿದ್ದಾರೆ. ಸಚಿವರು ಸಂದರ್ಶನವೊಂದರಲ್ಲಿ, ಸರ್ಕಾರಿ ಶಾಲಾ ಕಟ್ಟಡಗಳನ್ನು ಸ್ವಸಹಾಯ ಗುಂಪುಗಳಿಗೆ ನೀಡಲಾಗುವುದೆಂದು ಬಹಿರಂಗಪಡಿಸಿದ್ದಾರೆ. ಜೊತೆಗೆ, ಸರ್ಕಾರಿ ಶಾಲೆಗಳಿಗಾಗಿ ಆದಾಯ ಸಂಗ್ರಹಿಸಲು ಶಾಲೆಗಳ ಗೋಡೆಯ ಮೇಲೆ ಜಾಹೀರಾತಿಗೆ ಅವಕಾಶ ನೀಡುವ ಸರ್ಕಾರದ ನಡೆ ಸಂಪೂರ್ಣ ಖಾಸಗೀಕರಣಕ್ಕೆ ನಾಂದಿ ಹಾಡಲಿದೆ ಎಂದು ಪ್ರತಿಭಟನಾಕಾರರು ದೂರಿದರು.
*ಪ್ರತಿಭಟನಾ ಸ್ಥಳಕ್ಕೆ ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.*
ಪ್ರತಿಭಟನೆಯಲ್ಲಿ AIDSO ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಉಪಾಧ್ಯಕ್ಷೆ ಅಭಯಾ ದಿವಾಕರ್, ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ, ಕಚೇರಿ ಕಾರ್ಯದರ್ಶಿಗಳಾದ ಮಹಾಂತೇಶ್ ಗದಗ ಜಿಲ್ಲಾ ಸಂಚಾಲಕರು ಎಂ ಶಾಂತಿ ಹಾಗೂ ಇಂಡಾಲ್ ನಗರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷರಾದ ರಾಮು, ಕಾರ್ಯದರ್ಶಿಗಳಾದ ತಾರಾ ಕುಲಕರ್ಣಿ, ಸಿಂದೊಳ್ಳಿ ಗ್ರಾಮದ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಶಾಪುರ್ಕರ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹಾಲಿಂಗರಾಯ ಶಾಪುರ್ಕರ್, ಬಸರಿಕಟ್ಟೆ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ಬಸವರಾಯಿ ಕೊಂಡಸಕೊಪ್ಪ, ಕಾರ್ಯದರ್ಶಿಗಳಾದ ಕೃಷ್ಣ ಕೊಂಡಸಕೊಪ್ಪ, ಶಗಣಮಟ್ಟಿ ಸಮಿತಿಯ ರಾಜು ಪಾಟೀಲ, ಕೇದಾರಿ ಹಸ್ಟೇಕರ್ ಸೇರಿದಂತೆ ವಿವಿಧ ಗ್ರಾಮಗಳಿಂದ ತಾಯಂದಿರು ಪಾಲಕರು ಹಾಗೂ ಊರಿನ ಹಿರಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು
ಬೇಡಿಕೆಗಳು:
1.ಕರ್ನಾಟಕದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ/ಮುಚ್ಚುವ ಪ್ರಕ್ರಿಯೆಯನ್ನು ಈ ಕೂಡಲೇ ಹಿಂಪಡೆಯಿರಿ.
2. ಹೊಂಗನೂರಿನ ಕೆಪಿಎಸ್ ಶಾಲೆಗೆ ಸುತ್ತಮುತ್ತಲಿನ 7 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ನಿರ್ದೇಶಿಸಿರುವ ಸತ್ತೋಲೆ ಸಂಖ್ಯೆ-ಎ1,ಕ.ಪ.ಶಾಲೆಹೊವಿಲೀನ01/2025-26 ಈ ಕೋಡಲೆ ಹಿಂಪಡೆಯಿರಿ. ಹೊಂಗನೂರಿನ ಶಾಲಾ ವಿಲೀನ ಪ್ರಕ್ರಿಯೆಯನ್ನು ಹಿಂಪಡೆಯಿರಿ.
3. ಕೆಪಿಎಸ್-ಮ್ಯಾಗ್ನೆಟ್ ಯೋಜನೆಯ ಸರ್ಕಾರದ ನಡಾವಳಿಗಳನ್ನು ಹಿಂಪಡೆಯಿರಿ. ದಿನಾಂಕ 15, ಅಕ್ಟೋಬರ್ 2025 ರ ಸುತ್ತೋಲೆಯ ವಿಲೀನದ ಅಂಶವನ್ನು ಹಾಗೂ ಖಾಸಗೀಕರಣದ ಎಲ್ಲಾ ಅಂಶಗಳನ್ನು ಹಿಂಪಡೆಯಬೇಕು ಮತ್ತು ಯಾವುದೇ ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಲಿಖಿತ ಆದೇಶ ಹೊರಡಿಸಬೇಕು.
4. ಜಾಹೀರಾತು ಸೇರಿದಂತೆ ಯಾವುದೇ ವ್ಯಾಪಾರದ ಉದ್ದೇಶಕ್ಕೆ ಸರ್ಕಾರಿ ಶಾಲೆಗಳನ್ನು ಬಳಸಬಾರದು.
5. ಪ್ರತಿಯೊಂದು ಸರ್ಕಾರಿ ಶಾಲೆಗೆ ಅಗತ್ಯ ಶಿಕ್ಷಕರು, ಮೂಲಸೌಕರ್ಯ, ಕಲಿಕಾ ಸಾಮಗ್ರಿಗಳು ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯೊಂದಿಗೆ ಬಲಪಡಿಸುವುದು.