ಕರುನಾಡು ಘರ್ಜನೆ ಸುದ್ದಿ ಗದಗ: KPS – Magnet ಯೋಜನೆ ಮೂಲಕ, ವಿಲೀನದ ಹೆಸರಿನಲ್ಲಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನೀತಿಯ ವಿರುದ್ಧ ರಾಜ್ಯವ್ಯಾಪಿ ಭುಗಿಲೆದ್ದಿರುವ ಜನ ಹೋರಾಟಕ್ಕೆ ಮನ್ನಣೆ ನೀಡಿ ನೆನ್ನೆ ನಡೆದ ತುಮಕೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ
ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಹಾಗೂ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಬುದ್ಧಿಜೀವಿಗಳು ಕನ್ನಡ ಶಾಲೆಗಳನ್ನು ಉಳಿಸಲು ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ!
AIDSO ಕರ್ನಾಟಕ ರಾಜ್ಯ ಸಮಿತಿ ಸಾಹಿತಿಗಳಿಗೆ ಜನತೆಯ ಪರವಾಗಿ ಧನ್ಯವಾದ ಅರ್ಪಿಸುತ್ತದೆ. ಇದು ಈ ರಾಜ್ಯದ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಉಳಿಸಲು ಮುನ್ನಡೆಸುತ್ತಿರುವ ಜನಹೋರಾಟಕ್ಕೆ ದೊರಕಿದ ನೈಜ ಸ್ಪಂದನೆಯಾಗಿದೆ.
ಆದರೆ ಈ ಸಾಹಿತಿಗಳ ಕುರಿತು ರಾಜ್ಯದ ಶಾಲಾ ಶಿಕ್ಷಣ ಮಂತ್ರಿಗಳು ಅಗೌರವದಿಂದ ಮಾತನಾಡಿದ್ದಾರೆ. ಸರ್ಕಾರದ ಈ ಆಕ್ಷೇಪಾರ್ಹ ವರ್ತನೆಗೆ ಎಐಡಿಎಸ್ಓ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ. ಬಡವರ ಪರ ಭಾಷಣ ಮಾಡುತ್ತ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರನಾಡಿನ ಜನತೆಗೆ ದ್ರೋಹವೆಸಗಿದೆ. ಯಾವುದೇ ಶಾಲೆ ಮುಚ್ಚುತ್ತಿಲ್ಲ ಎಂಬ ಒಂದೇ ಸುಳ್ಳನ್ನು ಸಾವಿರ ಸಾರಿ ಉಚ್ಚರಿಸುತ್ತ ಅದನ್ನೇ ಸತ್ಯ ಎಂದು ಬಿಂಬಿಸುತ್ತಿರುವ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ನಾಡಿನ ಪ್ರಜ್ಞಾವಂತ ಜನತೆಗೆ ಎಐಡಿಎಸ್ಓ ಕರೆ ನೀಡುತ್ತದೆ.