ಕರುನಾಡು ಘರ್ಜನೆ ಸುದ್ದಿ ಬಳ್ಳಾರಿ: ನಗರದ ಅವಂಬಾವಿ ಪ್ರದೇಶದಲ್ಲಿ ಬ್ಯಾನರ್ ಅಳವಡಿಸುವ ವಿಚಾರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ತೀವ್ರ ಘರ್ಷಣೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.
ಜನವರಿ 3ರಂದು ನಗರದಲ್ಲಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಹಿನ್ನೆಲೆಯಲ್ಲಿ ಭರತ್ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ಅವರ ಮನೆಯ ಮುಂಭಾಗ ಬ್ಯಾನರ್ ಅಳವಡಿಸಲು ಮುಂದಾಗಿದ್ದರು. ಇದಕ್ಕೆ ಜನಾರ್ದನ ರೆಡ್ಡಿ ಅಭಿಮಾನಿಗಳು ಮತ್ತು ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬ್ಯಾನರ್ ವಿಚಾರವಾಗಿ ಆರಂಭವಾದ ಸಣ್ಣ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆಯೂ ಕಲ್ಲು ತೂರಿರುವುದು ವರದಿಯಾಗಿದೆ.
ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಹರಸಾಹಸ ಪಟ್ಟು ಗುಂಪು ಚದುರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ. ಸದ್ಯ ಅವಂಬಾವಿ ಏರಿಯಾದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ.