ಕರುನಾಡು ಘರ್ಜುನೆ ಸುದ್ದಿ ಗದಗ: ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಹಾಗೂ ವಸತಿ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗದಗ ವತಿಯಿಂದ ಕೈಗೊಂಡಿರುವ ಒಟ್ಟು ₹4,586 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಲೋಕಾರ್ಪಣೆಯನ್ನು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವರಾದ ಬಿ ಝಡ್ ಜಮೀರ್ ಅಹ್ಮದ್ ಖಾನ್ ಮತ್ತು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ಮಂಗಳವಾರ (ಜ.20) ನೆರವೇರಿಸಲಿದ್ದಾರೆ.
ನಗರದ ಗಂಗಿಮಡಿ ಪ್ರದೇಶದಲ್ಲಿ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಸ್ಕೂಲ್ (ಇಂಗ್ಲಿಷ್ ಮೀಡಿಯಂ) ಉದ್ಘಾಟನೆಗೆ ₹235 ಲಕ್ಷ ವೆಚ್ಚ ಮಾಡಲಾಗಿದ್ದು, ಇದೇ ಶಾಲೆಯಲ್ಲಿ ಹೆಚ್ಚುವರಿ ತರಗತಿಕೋಣೆಗಳ ನಿರ್ಮಾಣಕ್ಕೆ ₹142 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನಡೆಯಲಿದೆ. ಈ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ಅನುಷ್ಠಾನಗೊಳಿಸುತ್ತಿದೆ. ಜ. 20 ರಂದು ಮಧ್ಯಾಹ್ನ 3:30 ಗಂಟೆಗೆ ಉದ್ಘಾಟನೆ ನೆರವೇರಲಿದೆ.
ಬೆಟಗೇರಿಯಲ್ಲಿ ನಿರ್ಮಾಣಗೊಂಡಿರುವ ವಿದ್ಯಾರ್ಥಿ ವಸತಿ ನಿಲಯವನ್ನು ₹1,209 ಲಕ್ಷ ವೆಚ್ಚದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ಉದ್ಘಾಟನೆ ನೆರವೇರಲಿದೆ.
ಹರ್ತಿ ಗ್ರಾಮದಲ್ಲಿ ಗರ್ಲ್ಸ್ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಸಹಶಿಕ್ಷಣ) ₹1,000 ಲಕ್ಷ ವೆಚ್ಚದಲ್ಲಿ ಉದ್ಘಾಟನೆಯಾಗಲಿದೆ. ಜೊತೆಗೆ, ಹರ್ತಿ ಗ್ರಾಮದಲ್ಲೇ ನವೋದಯ ಮಾದರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ಮಾಣಕ್ಕೆ ₹2,000 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಲಿದೆ. ಈ ಕಾಮಗಾರಿಗಳನ್ನು ಕರ್ನಾಟಕ ಹೌಸಿಂಗ್ ಬೋರ್ಡ್ (KHB) ಮೂಲಕ ಅನುಷ್ಠಾನಗೊಳಿಸಲಾಗಿದೆ. ಸಂಜೆ 4:30 ಗಂಟೆಗೆ ಉದ್ಘಾಟನೆ ನೆರವೇರಲಿದೆ.
ಈ ಕಾರ್ಯಕ್ರಮಗಳ ಮೂಲಕ ಗದಗ ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಸುರಕ್ಷಿತ ವಸತಿ ಹಾಗೂ ಸಮಾನ ಅವಕಾಶಗಳು ದೊರೆಯಲಿದ್ದು, ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಹಾಗೂ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ , ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ, ಹಾವೇರಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಸಂಸದ ಪಿ.ಸಿ.ಗದ್ದಿಗೌಡರ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ, ನರಗುಂದ ಶಾಸಕ ಸಿ.ಸಿ.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ವಿಧಾನ ಪರಿಷತ್ ಶಾಸಕರುಗಳಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ, ಗದಗ ಬೆಟಗೆರಿ ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ , ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾದ ಅಧ್ಯಕ್ಷ ಬಿ.ಬಿ.ಅಸೂಟಿ ಆಗಮಿಸುವರು.
ವಿಶೇಷ ಆಹ್ವಾನಿತರಾಗಿ ಯೋಜನೆ ಕಾರ್ಯಕ್ರಮಗಳು, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿಗಳು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಶ್ರೀಮತಿ ಜಾನಕಿ ಕೆ.ಎಂ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಸಿ.ಎನ್.ಶ್ರೀಧರ್ , ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ರೋಹನ್ ಜಗದೀಶ್, ಆಗಮಿಸಲಿದ್ದಾರೆ.