ಕರುನಾಡು ಘರ್ಜುನೆ ಸುದ್ದಿ ಗದಗ ಜನೆವರಿ 27: ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಮಂಗಳವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸವಿತಾ ಮಹರ್ಷಿಗಳು ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದವರಾಗಿದ್ದಾರೆ. ಪ್ರತಿಯೊಬ್ಬರೂ ಅಂದವಾಗಿ ಕಾಣಲು ಸವಿತಾ ಸಮಾಜದವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ಶಿವನು ಸವಿತಾ ಮಹರ್ಷಿಗಳಿಗೆ ಮಂಗಳವಾದ್ಯಗಳನ್ನು ಕೊಟ್ಟನು ಎಂದು ಉಲ್ಲೇಖಿಸಲಾಗಿದೆ. ಸವಿತಾ ಮಹರ್ಷಿಗಳು ಸಾಮವೇದವನ್ನು ರಚಿಸಿದವರು. ಸವಿತಾ ಸಮಾಜದವರು ಸಂಗೀತ ಪ್ರಿಯರಾಗಿದ್ದು ಶುಭ ಸಮಾರಂಭಗಳಲ್ಲಿ ವಾದ್ಯ ನುಡಿಸುವುದನ್ನು ಕಾಣಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ನುಡಿದರು.
ಗಣ್ಯರಾದ ಕೃಷ್ಣಗೌಡ ಪಾಟೀಲ ಅವರು ಮಾತನಾಡಿ ಸರ್ಕಾರದ ವತಿಯಿಂದ ಸವಿತಾ ಮಹರ್ಷಿಗಳ ಜಯಂತಿ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಸಮಸಮಾಜ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಶ್ರಮದ ಮೂಲಕ ಗುರುತಿಸಿಕೊಂಡಿರುವ ಸಮಾಜವೇ ಸವಿತಾ ಸಮಾಜವಾಗಿದೆ. ಸವಿತಾ ಮಹರ್ಷಿಗಳ ತತ್ವಗಳನ್ನು ಎಲ್ಲರೂ ಪಾಲಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಡಿ.ವೈ.ಎಸ್,ಪಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ರವಿಕುಮಾರ್ ರೆಡ್ಡಿ, ಹನುಮಂತಪ್ಪ, ವೆಂಕಟೇಶ ರಣತೂರ, ಸಮಾಜದ ಗಣ್ಯರು ಹಿರಿಯರು, ಪ್ರಮುಖರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಸವಿತಾ ಸಮಾಜದ ಅಧ್ಯಕ್ಷ ಕೃಷ್ಣ ಹಡಪದ ಸರ್ವರಿಗೂ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಪಿಪಿಜಿ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಸವರಾಜ ಬಳ್ಳಾರಿ ವಂದಿಸಿದರು.