ಕರುನಾಡು ಘರ್ಜನೆ ಗದಗ : ಗದಗ ನಗರದ ಪ್ರಸಿದ್ಧ ದೇವಸ್ಥಾನವಾದ ವೀರನಾರಾಯಣ ದೇವಸ್ಥಾನ ರಮೇಶ ಗುಡಿ ಹಾಗೂ ಇತರೆ ಮೂರು ಸದಸ್ಯರಿಗೆ ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದ ಕಾರ್ಯಗಳಲ್ಲಿ ಭಾಗವಹಿಸದಂತೆ ನಿಷೇಧಿಸಿ ಆದೇಶ
ಗದುಗ : ಗದುಗಿನ ಶ್ರೀ ವೀರನಾರಾಣ ದೇವಾಲಯದ ಹೆಸರಿನಲ್ಲಿ ಅನಧಿಕೃತವಾಗಿ ರಸೀದಿಗಳನ್ನು ಮುದ್ರಿಸಿ, ದೇವರ ಭಾವಚಿತ್ರವನ್ನು ಬಳಸಿಕೊಂಡು ಸಾರ್ವಜನಿಕರು ಹಾಗೂ ಭಕ್ತರಿಂದ ಪರಿಚಾರಕರ ವೈಯಕ್ತಿಕ ಹೆಸರಿನಲ್ಲಿ ಮತ್ತು ವೈಯಕ್ತಿಕ ಬ್ಯಾಂಕ್ ಖಾತೆಗಳ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಶ್ರೀ ರಮೇಶ ಗುಡಿ ಹಾಗೂ ಇತರೆ ಸದಸ್ಯರು, ಶ್ರೀ ವೀರನಾರಾಣ ದೇವರ ಭಾವಚಿತ್ರ ಬಳಸಿ ಮುದ್ರಿಸಿದ ರಸೀದಿಗಳಲ್ಲಿ ಬ್ರಹ್ಮಕಲಶೋತ್ಸವದ ಸೇವಾ ವಿವರಗಳನ್ನು ನಮೂದಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೇಣಿಗೆಯನ್ನು ಶ್ರೀ ವರುಣ ಗುಡಿ ಎಂಬ ವ್ಯಕ್ತಿಯ ವೈಯಕ್ತಿಕ ಬ್ಯಾಂಕ್ ಖಾತೆಯ ಕ್ಯೂಆರ್ ಸ್ಕ್ಯಾನರ್ ಮೂಲಕ ಅನಧಿಕೃತವಾಗಿ ಸಂಗ್ರಹಿಸಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಶ್ರೀ ರಮೇಶ ಗುಡಿ ಹಾಗೂ ಇತರೆ ಮೂರು ಸದಸ್ಯರನ್ನು ತಕ್ಷಣದಿಂದಲೇ ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದ ಯಾವುದೇ ಕಾರ್ಯಗಳಲ್ಲಿ ಭಾಗವಹಿಸದಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಸಾರ್ವಜನಿಕರು ಹಾಗೂ ಭಕ್ತರು, ಶ್ರೀ ವೀರನಾರಾಣ ದೇವರ ಭಾವಚಿತ್ರ ಬಳಸಿಕೊಂಡು ಮುದ್ರಿಸಿದ ರಸೀದಿಗಳ ಮೂಲಕವಾಗಲಿ ಅಥವಾ ಬ್ರಹ್ಮಕಲಶೋತ್ಸವದ ಹೆಸರಿನಲ್ಲಿ ಶ್ರೀ ರಮೇಶ ಗುಡಿ ಮತ್ತು ಶ್ರೀ ವರುಣ ಗುಡಿ ಅವರ ವೈಯಕ್ತಿಕ ಬ್ಯಾಂಕ್ ಖಾತೆಯ ಕ್ಯೂಆರ್ ಸ್ಕ್ಯಾನರ್ ಮೂಲಕವಾಗಲಿ ಅಥವಾ ನಗದು ರೂಪದಲ್ಲಿ ಆಗಲಿ ಯಾವುದೇ ರೀತಿಯ ದೇಣಿಗೆಯನ್ನು ನೀಡಬಾರದು ಎಂದು ಜಿಲ್ಲಾಡಳಿತದ ಪರವಾಗಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತದ ಅನುಮೋದಿತ ಅಧಿಕೃತ ಮಾರ್ಗಗಳ ಮೂಲಕ ಮಾತ್ರ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.