ಕರುನಾಡು ಘರ್ಜನೆ ಸುದ್ದಿ ಗದಗ 09: “ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಅಂದವನ್ನು ಹೆಚ್ಚಿಸುವ, ಜನರ ಆರೋಗ್ಯ ಕಾಪಾಡುವ ಸವಿತಾ ಸಮಾಜದ ಬಾಂಧವರು ಇಂದು ಕತ್ತರಿ ಹಿಡಿದು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ಕುರಿಗಾಹಿಗಳ ರಕ್ಷಣೆಗಾಗಿ ಗನ್ ಕೊಟ್ಟು ಆಸರೆಯಾದ ಸರ್ಕಾರದ ಕ್ರಮಕ್ಕೆ ತಲೆಬಾಗಿ ಸ್ವಾಗತಾರ್ಹ ಆದರೆ ಅದೇ ಸರ್ಕಾರಕ್ಕೆ, ನಮ್ಮ ರಕ್ತ ಮಾಂಸದ ಬದುಕಿನ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ದುರದೃಷ್ಟಕರ,” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಕ್ಷೌರಿಕರ ರಕ್ಷಣೆ ಹಾಗೂ ಭದ್ರತೆ ಕುರಿತು ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವೈದ್ಯರು ರೋಗಿಯನ್ನು ಮುಟ್ಟುವ ಮೊದಲು ಧರಿಸುವ ಪಿಪಿಇ ಕಿಟ್, ಗ್ಲೌಸ್ ಮಾದರಿಯಲ್ಲೇ, ಕ್ಷೌರಿಕ ವೃತ್ತಿ ನಿರತರಿಗೂ ಸರ್ಕಾರವು ‘ವೃತ್ತಿಪರ ಆರೋಗ್ಯ ಸುರಕ್ಷತಾ ಕಿಟ್’ಗಳನ್ನು ಉಚಿತವಾಗಿ ನೀಡಬೇಕು. ವೃತ್ತಿಯ ಕಾರಣದಿಂದ ಉಂಟಾಗುವ ಚರ್ಮದ ಕಾಯಿಲೆ ಅಥವಾ ಶ್ವಾಸಕೋಶದ ಸಮಸ್ಯೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆ ಸೌಲಭ್ಯ ನೀಡಬೇಕು ಎಂದ ಅವರು ಸಾವಿರಾರು ಜನರು ಕಾರ್ಮಿಕ ಕಾರ್ಡ್ ಪಡೆದು ವರ್ಷಗಳೇ ಕಳೆದರೂ, ಕಟ್ಟಡ ಕಾರ್ಮಿಕರಿಗೆ ಸಿಗುವಂತೆ ನಮಗೆ ಯಾವುದೇ ಶೈಕ್ಷಣಿಕ ಸೌಲಭ್ಯ ಅಥವಾ ಆರ್ಥಿಕ ಸಹಾಯಧನ ಸಿಗುತ್ತಿಲ್ಲ. ಈ ಕಾರ್ಡ್‌ಗಳು ಕೇವಲ ‘ವೋಟ್ ಬ್ಯಾಂಕ್’ ರಾಜಕಾರಣಕ್ಕೆ ಸೀಮಿತವಾಗದೆ, ನೈಜ ಸೌಲಭ್ಯಗಳನ್ನು ತಲುಪಿಸುವ ಸಾಧನವಾಗಲಿ ಎಂದರಲ್ಲದೆ ಕುರಿಗಾಹಿಗಳ ಮೇಲೆ ಹಲ್ಲೆಯಾದರೆ ಶಿಕ್ಷೆ ವಿಧಿಸುವ ಕಾಯ್ದೆಯ ಮಾದರಿಯಲ್ಲೇ, ವೃತ್ತಿ ನಿರತ ಕ್ಷೌರಿಕರಿಗೆ ಜಾತಿ ನಿಂದನೆ ಅಥವಾ ದೈಹಿಕ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ‘ವೃತ್ತಿ ಗೌರವ ರಕ್ಷಣಾ ಕಾಯ್ದೆ’ ಜಾರಿಗೆ ಬರಬೇಕು ಮತ್ತು ಸವಿತಾ ಸಮಾಜದ ಬಾಂಧವರ ಗೌರವ ಹೆಚ್ಚಿಸಲು ಸರ್ಕಾರವು ಪ್ರತಿ ತಾಲೂಕು ನಗರಗಳಲ್ಲಿ *’ಸರ್ಕಾರಿ ಸೌಹಾರ್ದ ಸಲೂನ್’* ಗಳನ್ನು ಆರಂಭಿಸಬೇಕು. ಅಲ್ಲಿನ ಕ್ಷೌರಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡುವ ಮೂಲಕ ವೃತ್ತಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು. ಈ ಕುರಿತು ಬಡವರ ಪರವಾದ ಹಿರಿಯ ಸಚಿವರಾದ ಎಚ್ ಕೆ ಪಾಟೀಲ ಸಾಹೇಬರು ರಾಜ್ಯ ಸವಿತಾ ಸಮಾಜದ 25 ಲಕ್ಷ ಜನ ಕ್ಷೌರಿಕರ ದ್ವನಿಯಾಗಬೇಕೆಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಹಿರಿಯ ಸಚಿವರಾದ ಎಚ್ ಕೆ ಪಾಟೀಲ ಸಾಹೇಬರಲ್ಲಿ ಮತ್ತು ಸರ್ಕಾರಕ್ಕೆ ಸಭೆ ಮೂಲಕ ಮನವಿ ಮಾಡಿ ಒತ್ತಾಯಿಸಿ ಆಗ್ರಹಿಸಿದ್ದಾರೆ.
ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೋಟೆಕಲ್ಲ ಅವರು ಮಾತನಾಡಿ ಸವಿತಾ. ಮರಾಠ. ಸಮಾಜದ ಕ್ಷೌರಿಕರು ಅಲೆಮಾರಿ ಕಾರ್ಮಿಕರಲ್ಲ ನಾವು, ಅಸಂಘಟಿತ ಸೈನಿಕರು ಎಂದು ಹೇಳಿದ ಅವರು ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಕೇವಲ ಘೋಷಣೆಗಳನ್ನು ಮಾಡದೆ, ಗದಗ ಜಿಲ್ಲೆಯಂತಹ ತಾಲೂಕು ಹಾಗೂ ನಗರ ಭಾಗದ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ “ಸರ್ಕಾರದ ಬಜೆಟ್ ಘೋಷಣೆ ಕೇವಲ ಅಂಕಿ-ಅಂಶಗಳ ಆಟವಾಗದೆ, ಸವಿತಾ ಸಮಾಜದ ಬದುಕಿಗೆ ನಿಜವಾದ ಬೆಳಕಾಗಲಿ. ಸಾಲದ ಹೆಸರಿನಲ್ಲಿ ‘ಆಸ್ತಿ ಭದ್ರತೆ’ಯ ಕಠಿಣ ನಿಯಮಗಳನ್ನು ಹೇರಿ ಬಡವರನ್ನು ಬ್ಯಾಂಕುಗಳ ಮುಂದೆ ಕೈಚಾಚುವಂತೆ ಮಾಡಬೇಡಿ. 10 ಲಕ್ಷದ ಯೋಜನೆಯಲ್ಲಿ 5 ಲಕ್ಷ ನೇರ ಸಬ್ಸಿಡಿ ನೀಡಿ, ಉಳಿದ ಮೊತ್ತಕ್ಕೆ ಯಾವುದೇ ಶ್ಯೂರಿಟಿ ಇಲ್ಲದೆ ಸರಳ ಸಾಲದ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿ ಸರ್ಕಾರಕ್ಕೆ ಒತ್ತಾಯಿಸಿದರು
ಸಂತ ಸೇನಾ ಮಹಾರಾಜ್ ನಾಬಿಕ್ ಮರಾಠ (ಸವಿತಾ) ಸಮಾಜದ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ ಅವರು ಮಾತನಾಡಿ ಕಸುಬನ್ನೇ ನಂಬಿ ಬದುಕುವ ನಮಗೆ ದಾಖಲೆಗಳಿಗಿಂತ ಹೆಚ್ಚಾಗಿ ಬದುಕುವ ಹಕ್ಕಿನ ಮೇಲೆ ನಂಬಿಕೆಯಿಡಿ. ಈ ಕ್ರಮವೊಂದೇ ಸವಿತಾ ಸಮಾಜಕ್ಕೆ ಸರ್ಕಾರ ನೀಡುವ ನಿಜವಾದ ಗೌರವ ಮತ್ತು ನ್ಯಾಯಯುತವಾದ ಕೊಡುಗೆಯಾಗುತ್ತದೆ.” ಎಂದರು
ರಾಜ್ಯ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ರಾಜ್ಯ ಕಾರ್ಯದರ್ಶಿಗಳಾದ ಹನುಮಂತಪ್ಪ ರಾಂಪುರ ಹಾಗೂ ಹಿರಿಯರಾದ ದೀಪಕ ಮಾನೆ ಅವರು ಜಂಟಿಯಾಗಿ ಮಾತನಾಡಿ “ನಾವು ಕೇವಲ ಕ್ಷೌರ ಮಾಡುವ ಕೈಗಳಲ್ಲ, ಈ ದೇಶದ ಅಸಂಘಟಿತ ವಲಯದ ಶಕ್ತಿಗಳು. ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಗದಗ ಜಿಲ್ಲೆಯ ಸವಿತಾ ಸಮಾಜದ ಪ್ರತಿಯೊಬ್ಬ ಸದಸ್ಯನೂ ಬೀದಿಗೆ ಇಳಿದು ವಿಧಾನಸೌಧದವರೆಗೆ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ,” ಎಂದು ಎಚ್ಚರಿಸಿದ್ದಾರೆ.
ಸವಿತಾ ಸಮಾಜದ ನಾಯಕರಾದ ಹೇಮಂತ ತುಕಾರಾಮ ವಡ್ಡೆಪಲ್ಲೇ ಮತ್ತು ಸಮಾಜದ ಕ್ರೀಡಾಧಿಕಾರಿಗಳಾದ ಶ್ರೀನಿವಾಸ ಕೋಟೆಕಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು
ಹಿರಿಯರಾದ ಪಾಂಡು ಕಾಳೆ ಸಭೆಯಲ್ಲಿ ಎಲ್ಲರನ್ನ ಸ್ವಾಗತಿಸಿದರು. ಸವಿತಾ ಸಮಾಜದ ರಾಜ್ಯ ಯುವ ಘಟಕದ ಯುವ ನಾಯಕರಾದ ನವೀನ ಕೋಟೆಕಲ್ಲ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಾನೆ ವಂದನಾರ್ಪಣೆಗೈದರು.
ಸಭೆಯಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಗುರುಹಿರಿಯರು ಬಂಧು ಬಾಂಧವರು ಹಾಜರಿದ್ದರು
*ಬಾಕ್ಸ್ ಹೇಳಿಕೆ*
°°°°°°°°°°°°°°°°°
“ಕುರಿಗಾಹಿಗಳಿಗೆ ರಕ್ಷಣೆಗೆ ಗನ್ ಕೊಟ್ಟಿದ್ದೀರಿ, ವೈದ್ಯರಿಗೆ ಸುರಕ್ಷತಾ ಕವಚಗಳಿವೆ. ಆದರೆ, ದಿನವಿಡೀ ಅಪರಿಚಿತರನ್ನು ನೇರವಾಗಿ ಮುಟ್ಟಿ ಸೇವೆ ನೀಡುವ ಕ್ಷೌರಿಕರ ಜೀವಕ್ಕೆ ಬೆಲೆ ಇಲ್ಲವೇ?.. ನಮಗೂ ‘ಕಟ್ಟಡ ಕಾರ್ಮಿಕರ’ ಮಾದರಿಯಲ್ಲೇ ಸೌಲಭ್ಯ ನೀಡಿ, ನಮ್ಮ ಕುಟುಂಬಗಳನ್ನು ಅನಾಥವಾಗದಂತೆ ಕಾಪಾಡಿ.”
“ಹೇಮಂತ ವಡ್ಡೆಪಲ್ಲೇ”
ಮಾಜಿ ಅಧ್ಯಕ್ಷರು – ಸವಿತಾ ಸಮಾಜ ಸುಧಾರಣಾ ಸಂಘ ಗದಗ
“ಗನ್ ಬೇಡ, ಕ್ಷೌರಿಕರ ಬದುಕಿಗೆ ಭದ್ರತೆ ಕೊಡಿ ಮತ್ತು ‘ವೃತ್ತಿ ಗೌರವ ರಕ್ಷಣಾ ಕಾಯ್ದೆ’ ಜಾರಿಗೆ ತನ್ನಿ – ಕೃಷ್ಣಾ ಹಡಪದ ಆಗ್ರಹ
ಕರುನಾಡು ಘರ್ಜನೆ ಸುದ್ದಿ ಗದಗ 09: “ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಅಂದವನ್ನು ಹೆಚ್ಚಿಸುವ, ಜನರ ಆರೋಗ್ಯ ಕಾಪಾಡುವ ಸವಿತಾ ಸಮಾಜದ ಬಾಂಧವರು ಇಂದು ಕತ್ತರಿ ಹಿಡಿದು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ಕುರಿಗಾಹಿಗಳ ರಕ್ಷಣೆಗಾಗಿ ಗನ್ ಕೊಟ್ಟು ಆಸರೆಯಾದ ಸರ್ಕಾರದ ಕ್ರಮಕ್ಕೆ…