Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಸಮಾನತೆಯ ಸೂರ್ಯ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅಕ್ಷರ ನಮನ. ಮಣ್ಣಿನ ಮೊಗದಲಿ ಮಿಂಚಾಗಿ ಮೂಡಿದನು ಮಹಿಮೆಯ ಮಹಾದೀಪವ ಹಚ್ಚಿದನು | ಹೀನತೆಯ ಹೆಪ್ಪುಗಟ್ಟಿದ ಹಿಮಗಿರಿಗಳ ನಡುವೆ ಹೆಮ್ಮೆಯ ಕೆನ್ನಾಲಗೆಯ ಜ್ವಾಲೆಯಾಗಿ ಹೊತ್ತಿದನು || ೧ || ಬಾಲ್ಯದ ಕಹಿಯುಣಿಸಿದ…

ಸಮಾನತೆಯ ಸೂರ್ಯ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅಕ್ಷರ ನಮನ.

ಮಣ್ಣಿನ ಮೊಗದಲಿ ಮಿಂಚಾಗಿ ಮೂಡಿದನು ಮಹಿಮೆಯ ಮಹಾದೀಪವ ಹಚ್ಚಿದನು | ಹೀನತೆಯ ಹೆಪ್ಪುಗಟ್ಟಿದ ಹಿಮಗಿರಿಗಳ ನಡುವೆ ಹೆಮ್ಮೆಯ ಕೆನ್ನಾಲಗೆಯ ಜ್ವಾಲೆಯಾಗಿ ಹೊತ್ತಿದನು || ೧ ||

ಬಾಲ್ಯದ ಕಹಿಯುಣಿಸಿದ ಬವಣೆಯಲಿ ಬೆಂದು ಸೋತು ಬೀಳದೆ ಸಿಡಿದು ನಿಂತವನು | ಸತತ ಸಾಧನೆಯ ಶ್ರದ್ದೆಯ ಪಥದಲಿ ಶಿಕ್ಷಣದ ಸಪ್ತಗಿರಿಗಳನ್ನೇ ಏರಿದನು || ೨ ||

”ಶಿಕ್ಷಣವೇ ಶಕ್ತಿ”ಯೆಂಬ ಕ್ರಾಂತಿಯ ಬೀಜವ ಶೋಷಿತರ ಬರಿದಾದ ಎದೆಯಲಿ ಬಿತ್ತಿದನು | ಅರಿವೆಂಬ ಅಕ್ಷಯ ಜ್ಯೋತಿಯನು ಬೆಳಗಿಸಿ ಜಾತಿಯ ಮಸಿಗತ್ತಲನು ಸೀಳಿ ಗೆದ್ದನು || ೩ ||

ಮಹೂವಿನ ಮಡಿಲಲಿ ಅರಳಿದ ಮಧುರ ಪುಷ್ಪ ಮಹನೀಯ ಮಾನವತೆಯ ಸಾಕಾರ ಮೂರ್ತಿ | ಕೊಲಂಬಿಯಾದ ಕಂಗಳಲಿ ಜ್ಞಾನದ ಚೈತನ್ಯವಾಗಿ ಜಗದಗಲ ಹರಡಿದನು ತನ್ನ ಕೀರ್ತಿ || ೪ ||

ಲಂಡನ್ನಿನ ವಿದ್ವತ್ ಸಭೆಯಲಿ ಅತಿರಥನಾಗಿ ಲೋಕದ ಜ್ಞಾನನಿಧಿಯನ್ನೇ ಲಭಿಸಿದನು | ತನ್ನ ತೀಕ್ಷ ಬುದ್ದಿಯ ವಜ್ರಾಯುಧದಿಂದ ಭುವಿಯಲಿ ಅಳಿಯದ ಮಹಿಮೆಯನು ಗೈದನು || ೫ ||

ಕಾಗದದ ಸಾಲುಗಳಲಿ ಕ್ರಾಂತಿಯ ಕಿಡಿ ಇರಿಸಿ ಕಾನೂನಿನ ಭದ್ರಕೋಟೆಯನು ಕಟ್ಟಿದನು | ಸಂವಿಧಾನವೆಂಬ ಉಜ್ವಲ ರೂಪದಿ ಭಾರತದಿ ಸಮಾನತೆಯ ಸೂರ್ಯನಾಗಿ ಮೂಡಿ ಬಂದನು || ೬ ||

ಜಾತಿ-ಜಂಜಾಳದ ವಿಷವೃಕ್ಷದ ಬೇರುಗಳ ಜಗದೆದುರು ಜಜ್ಜಿ ಪುಡಿಪುಡಿ ಮಾಡಿದನು | ಮಾನವೀಯತೆಯೇ ಮಹಾಧರ್ಮವೆಂದು ಸಾರಿ ಮೌಡ್ಯದ ಮಂಕುಬೂದಿಯನು ಹರಿಸಿದನು || ೭

|| : ಬುದ್ಧನ ದಮ್ಮದೀಪದ ಶಾಂತ ಬೆಳಕಲಿ ಬಂಧನದ ಹಳೆಯ ಬಾಗಿಲನು ತೆರೆದನು | ಸ್ವಾಭಿಮಾನದ ಸುದೀರ್ಘ ಹಾದಿಯಲಿ ನಡೆದು ಸಮಾನತೆಯ ಸುಂದರ ಲೋಕವನು ಸೃಜಿಸಿದನು || ೮ ||

ಜನ್ಮದಿನದ ಈ ಸಂಭ್ರಮವು ಇಂದು ಜಾಗೃತಿಯ ಜ್ಯೋತಿಯಾಗಿ ಎದೆಯಲಿ ಬೆಳಗಲಿ | ಬಾಬಾಸಾಹೇಬರ ವಿಶ್ವವ್ಯಾಪಿ ಚಿಂತನೆಗಳು ಅಖಿಲ ಬ್ರಹ್ಮಾಂಡದ ಅಣುವಿನಲಿ ಹರಡಲಿ || ೯ ||

ಅವನು ಬರಿ ವ್ಯಕ್ತಿಯಲ್ಲ, ಜ್ಞಾನದ ಮಹಾಸಾಗರ ವಿಶ್ವದ ಶ್ರೇಷ್ಠ ಚಿಂತನೆಯ ಅಮರ ರೂಪವನು | ನಮ್ಮ ಉಸಿರಿನಲಿ, ಹಸಿವಿನಲಿ ಸದಾ ಜೀವಿಸುವ ಅವನೇ ನಮ್ಮ ‘ನಿತ್ಯ ಸಮಾನತೆಯ ಸೂರ್ಯನು’ || ೧೦ ||

ಅಮೀರನಾಯಕ (ಕಲ್ಲಿಗನೂರ) ಗದಗ

ಜೈ ಭೀಮ್

ಸಮಾನತೆಯ ಸೂರ್ಯ: ಅಸ್ಪೃಶ್ಯತೆಯ ಕತ್ತಲ ಸೀಳಿದ ಅರಿವಿನ ಮಹಾಬೆಳಕು

ಅಮೀರನಾಯಕ (ಕಲ್ಲಿಗನೂರ) ಗದಗ

(“ಅವಮಾನಗಳ ಕೆಸರಿನಲ್ಲೇ ಅರಳಿ ಇಡೀ ಜಗತ್ತಿಗೆ ಅರಿವಿನ ಪರಿಮಳ ಹರಡಿದ ಅಕ್ಷರ ಸೂರ್ಯ ಬಾಬಾಸಾಹೇಬ್ ಅಂಬೇಡ್ಕರ್. ಬರಿಗೈಲಿ ಬಂದು ವಿಶ್ವವನ್ನೇ ಜ್ಞಾನದ ಮೂಲಕ ಗೆದ್ದ ಈ ಮಹಾನ್ ಮಾನವತಾವಾದಿಯ ಬದುಕು ಪ್ರತಿಯೊಬ್ಬ ಭಾರತೀಯನಿಗೂ ಒಂದು ಅದ್ಭುತ ಪಾಠ. ಕೋಟ್ಯಂತರ ಜನರ ಆತ್ಮಗೌರವವನ್ನು ಬಡಿದೆಬ್ಬಿಸಿದ ಆ ಸಮಾನತೆಯ ಹರಿಕಾರನ ಸಾಧನೆಯ ಹಾದಿಯ ಕುರಿತ ವಿಶೇಷ ಲೇಖನ.”)

ಇತಿಹಾಸದ ಪುಟಗಳಲಿ ಮೂಡಿದ ಮಹಾಕ್ರಾಂತಿ ಭಾರತದ ಇತಿಹಾಸವೆಂದರೆ ಅದು ಕೇವಲ ರಾಜ-ಮಹಾರಾಜರ ಕಥೆಯಲ್ಲ: ಅದು ಶೋಷಣೆ ಮತ್ತು ವಿಮೋಚನೆಯ ನಡುವಿನ ನಿರಂತರ ಸಂಘರ್ಷ. ಈ ಸಂಘರ್ಷದ ಭೂಮಿಕೆಯಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ, ದಾಸ್ಯದಿಂದ ಸ್ವಾಭಿಮಾನದೆಡೆಗೆ ಕೋಟ್ಯಂತರ ಜನರನ್ನು ಮುನ್ನಡೆಸಿದ ಮಹಾ ಚೇತನ ಡಾ. ಭೀಮರಾವ್ ರಾಮ್‌ ಜೀ ಅಂಬೇಡ್ಕರ್. ಅವರು ಕೇವಲ ಒಂದು ಜಾತಿಗೆ ಸೀಮಿತವಾದ ನಾಯಕರಲ್ಲ, ಬದಲಿಗೆ ಇಡೀ ಮಾನವಕುಲದ ಘನತೆಯನ್ನು ಎತ್ತಿಹಿಡಿದ ವಿಶ್ವಮಾನವ.

೧. ಮಹೂವಿನ ಮಣ್ಣಿನಿಂದ ಜಗದಗಲದ ಕೀರ್ತಿಯವರೆಗೆ

ಏಪ್ರಿಲ್ 14, 1891ರಂದು ಮಧ್ಯಪ್ರದೇಶದ ಮಹೂವಿನಲ್ಲಿ ಜನಿಸಿದ ಭೀಮನ ಬಾಲ್ಯವು ಹೂವಿನ ಹಾಸಿಗೆಯಾಗಿರಲಿಲ್ಲ. ಅಸ್ಪೃಶ್ಯತೆಯ ಎಂಬ ಅನಿಷ್ಟ ಪದ್ಧತಿಯು ಅವರ ಪ್ರತಿ ಹೆಜ್ಜೆಯಲ್ಲೂ ಮುಳ್ಳಾಗಿ ಚುಚ್ಚುತ್ತಿತ್ತು. ಶಾಲೆಯಲ್ಲಿ ನೀರು ಕುಡಿಯಲು ಪೇದೆಯ ಸಹಾಯ ಬೇಕಿತ್ತು, ತರಗತಿಯ ಹೊರಗೆ ಕೂತು ಪಾಠ ಕೇಳಬೇಕಿತ್ತು. ಆದರೆ, ಈ ಅವಮಾನಗಳೇ ಅವರಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸಿದವು. ತಂದೆ ರಾಮ್‌ ಜೀ ಸಕ್ಸಾಲ್ ಅವರ ಶಿಸ್ತು ಮತ್ತು ಶಿಕ್ಷಣದ ಮೇಲಿನ ಪ್ರೀತಿ ಭೀಮನ ಬದುಕಿಗೆ ಭದ್ರ ಬುನಾದಿ ಹಾಕಿತು.

೨. ಜ್ಞಾನದ ಬಾಯಾರಿಕೆ ಮತ್ತು ವಿದೇಶಿ ವ್ಯಾಸಂಗ

ಅಂಬೇಡ್ಕ‌ರ್ ಅವರ ಬದುಕು “ಶಿಕ್ಷಣವೇ ಶಕ್ತಿ” ಎಂಬುದಕ್ಕೆ ಜೀವಂತ ಸಾಕ್ಷಿ. ಬರೋಡಾ ಮಹಾರಾಜರ ಸಹಾಯದಿಂದ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದ ಅವರು, ಅಲ್ಲಿನ ಮುಕ್ತ ವಾತಾವರಣದಲ್ಲಿ ಸಮಾನತೆಯ ಅರ್ಥವನ್ನು ಕಂಡುಕೊಂಡರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ ನಲ್ಲಿ ಅವರು ನಡೆಸಿದ ಸಂಶೋಧನೆಗಳು ಕೇವಲ ಅರ್ಥಶಾಸ್ತ್ರಕ್ಕೆ ಸೀಮಿತವಾಗಿರದೆ, ಭಾರತದ ರೂಪಾಯಿ ಸಮಸ್ಯೆ ಮತ್ತು ಕೃಷಿ ಸುಧಾರಣೆಗಳಿಗೂ ಪರಿಹಾರ ಸೂಚಿಸಿದವು. ಒಬ್ಬ ದಲಿತ ಬಾಲಕ ಜಗತ್ತಿನ ಶ್ರೇಷ್ಠ ವಿದ್ವಾಂಸನಾಗಿ ಬೆಳೆದದ್ದು ಒಂದು ಅದ್ಭುತ ಪವಾಡವೇ ಸರಿ.

೩. ಮೂಕನಾಯಕನ ದನಿ: ಸಂಘಟನೆ ಮತ್ತು ಹೋರಾಟ

ವಿದೇಶದಿಂದ ಮರಳಿದ ಅಂಬೇಡ್ಕರ್ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಎಚ್ಚರಿಸಲು ನಿರ್ಧರಿಸಿದರು. ‘ಮೂಕನಾಯಕ’ ಪತ್ರಿಕೆಯ ಮೂಲಕ ಮೂಕ ಸಮುದಾಯಕ್ಕೆ ದನಿಯಾದರು. ಮಹಾಡ್ ಸತ್ಯಾಗ್ರಹದ ಮೂಲಕ ಚೌದಾ‌ರ್ ಕೆರೆಯ ನೀರನ್ನು ಮುಟ್ಟುವ ಹಕ್ಕಿಗಾಗಿ ಹೋರಾಡಿದ್ದು ಕೇವಲ ನೀರಿಗಾಗಿ ಅಲ್ಲ, ಅದು ಮನುಷ್ಯನ ಮೂಲಭೂತ ಹಕ್ಕಿಗಾಗಿ. ಮನುಸ್ಮೃತಿಯನ್ನು ದಹಿಸುವ ಮೂಲಕ ಅವರು ಸಾವಿರಾರು ವರ್ಷಗಳ ಅಸಮಾನತೆಯ ಪರಂಪರೆಗೆ ಅಗ್ನಿ ಸ್ಪರ್ಶ ಮಾಡಿದರು.

೪. ಸಂವಿಧಾನದ ಶಿಲ್ಪಿ: ನವ ಭಾರತದ ನಿರ್ಮಾತೃ

ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ದೊಡ್ಡ ವಿಷಯವಾಗಿರಲಿಲ್ಲ, ಆ ಸ್ವಾತಂತ್ರ್ಯ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುವುದು ಅಂಬೇಡ್ಕರ್ ಅವರ ಮುಖ್ಯ ಗುರಿಯಾಗಿತ್ತು. ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆ ಅಪಾರ.

ಮೂಲಭೂತ ಹಕ್ಕುಗಳು: ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದರು.

ಮಹಿಳಾ ಹಕ್ಕುಗಳು: ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಆಸ್ತಿ ಹಕ್ಕು ಮತ್ತು ಘನತೆಯ ಬದುಕು ನೀಡಲು ಶ್ರಮಿಸಿದರು.

ಕಾರ್ಮಿಕ ಕಲ್ಯಾಣ: ಎಂಟು ಗಂಟೆಗಳ ಕೆಲಸದ ಅವಧಿ, ಕನಿಷ್ಠ ವೇತನ ಮತ್ತು ಹೆರಿಗೆ ರಜೆಯಂತಹ ಸೌಲಭ್ಯಗಳನ್ನು ತಂದಿದ್ದೇ ಬಾಬಾಸಾಹೇಬರು.

೫. ಧಮ್ಮದ ಹಾದಿಯಲ್ಲಿ ಶಾಂತಿಯ ಹುಡುಕಾಟ

ಬಾಬಾಸಾಹೇಬರು ನಂಬಿದ್ದು ಅಹಿಂಸೆ ಮತ್ತು ನ್ಯಾಯವನ್ನು. “ನಾನು ಹಿಂದೂವಾಗಿ ಹುಟ್ಟಿರಬಹುದು, ಆದರೆ ಹಿಂದೂವಾಗಿ ಸಾಯಲಾರೆ” ಎಂಬ ಅವರ ಪ್ರತಿಜ್ಞೆ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ಸಾಕಾರವಾಯಿತು. ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಅವರು ಶೋಷಿತರಿಗೆ ಹೊಸ ಅಧ್ಯಾತ್ಮಿಕ ಮತ್ತು ಮಾನಸಿಕ ಸ್ವಾತಂತ್ರ್ಯವನ್ನು ನೀಡಿದರು. ಬುದ್ಧನ ‘ಕರುಣೆ’ ಮತ್ತು ‘ಪ್ರಜ್ಞೆ’ ಅವರ ಬದುಕಿನ ಅಂತಿಮ ಗುರಿಯಾಗಿತ್ತು.

೬. ಇಂದಿನ ಕಾಲಘಟ್ಟದಲ್ಲಿ ಅಂಬೇಡ್ಕರ್ ಪ್ರಸ್ತುತತೆ

ಇಂದು ಭಾರತವು ಜಗತ್ತಿನ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿಂತಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನದ ಬುನಾದಿಯೇ ಕಾರಣ. ಆದರೆ, ಇಂದಿಗೂ ಜಾತಿ ಪದ್ಧತಿ, ಲಿಂಗ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಗಳು ನಮ್ಮನ್ನು ಕಾಡುತ್ತಿವೆ. ಅಂಬೇಡ್ಕರ್ ಅವರ “ಶಿಕ್‌ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಟ ಮಾಡಿ” ಎಂಬ ಮಂತ್ರ ಇಂದಿಗೂ ಪ್ರಸ್ತುತ.

 

ಡಾ. ಬಿ. ಆರ್. ಅಂಬೇಡ್ಕರ್ ಅವರು ಒಂದು ಜ್ಯೋತಿಯಾಗಿ ಬೆಳಗಿ, ಕತ್ತಲಲ್ಲಿದ್ದ ಕೋಟ್ಯಂತರ ಬದುಕುಗಳಿಗೆ ದಾರಿದೀಪವಾದರು. ಅವರು ಕೇವಲ ಇತಿಹಾಸದ ವ್ಯಕ್ತಿಯಲ್ಲ, ಪ್ರತಿ ಕ್ಷಣವೂ ನಮ್ಮ ಹಕ್ಕುಗಳಿಗಾಗಿ ಪ್ರೇರೇಪಿಸುವ ಜೀವಂತ ಶಕ್ತಿ. ಈ ಜಯಂತಿಯ ಸಂದರ್ಭದಲ್ಲಿ ಅವರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.

ಅಮೀನ್ ನಾಯಕ್ ಕಲ್ಲಿಗನೂರ ಗದಗ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಗ್ರಾಮ ಪಂಚಾಯತ್ ಲಕ್ಕುಂಡಿ

ಜೈ ಭೀಮ್!

 

Editor

Leave a comment