ಕರುನಾಡು ಘರ್ಜನೆ ಸುದ್ದಿ ಗದಗ 12: ಕಾವ್ಯವೆಂದರೆ ಕೇವಲ ಪ್ರಕೃತಿಯ ವರ್ಣನೆಯಲ್ಲ, ಅದು ಸಮಾಜದ ಜೀವಂತ ತಲ್ಲಣಗಳಿಗೆ ಮಿಡಿಯುವ ಅಸ್ತ್ರ ಎಂಬುದನ್ನು ಸಾಬೀತುಪಡಿಸುವಂತೆ ಲೇಖಕಿ ಮಂಜುಳಾ ವೆಂಕಟೇಶಯ್ಯ ಅವರ ಬಹುನಿರೀಕ್ಷಿತ ‘ಮಹಾಪಯಣ’ ಕವನ ಸಂಕಲನವು ನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ ಅರ್ಥಪೂರ್ಣ ಸಾಹಿತ್ಯಿಕ ಸಂಜೆ ಕಾರ್ಯಕ್ರಮದಲ್ಲಿ ಅತ್ಯಂತ ಯಶಸ್ವಿಯಾಗಿ ಲೋಕಾರ್ಪಣೆಗೊಂಡಿತು.
ನಾಡಿನ ಪ್ರಸಿದ್ಧ ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರ ಧುರೀಣರ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭವು ಇಡೀ ರಾಜ್ಯದ ಸಾಹಿತ್ಯ ವಲಯದ ಗಮನ ಸೆಳೆಯುವಂತಹ ವೈಚಾರಿಕ ಜಾಗೃತಿಗೆ ಸಾಕ್ಷಿಯಾಯಿತು.
*ಮೊಮ್ಮಗನ ಜನ್ಮದಿನದ ಸವಿನೆನಪಲ್ಲಿ ಕಾವ್ಯದ ‘ಮಹಾಪಯಣ’:*
ಈ ಸಮಾರಂಭಕ್ಕೆ ಮತ್ತೊಂದು ವಿಶೇಷ ಹಾಗೂ ಅತ್ಯಂತ ಭಾವುಕ ಮೆರುಗು ಬಂದಿದ್ದು ಲೇಖಕಿ ಶ್ರೀಮತಿ ಮಂಜುಳಾ ವೆಂಕಟೇಶಯ್ಯ ಅವರ ಅಪರೂಪದ ಸಾಹಿತ್ಯಿಕ ಸಂಕಲ್ಪದಿಂದ. ತಮ್ಮ ಪ್ರೀತಿಯ ಮೊಮ್ಮಗನ ಜನ್ಮದಿನಾಚರಣೆಯ ಸವಿನೆನಪನ್ನು ಕೇವಲ ಕೌಟುಂಬಿಕ ಆಚರಣೆಗೆ ಸೀಮಿತಗೊಳಿಸದೆ, ಸಾಹಿತ್ಯಿಕವಾಗಿ ಅಮರಗೊಳಿಸಲು ಅವರು ಇದೇ ಶುಭ ದಿನವನ್ನೇ ಕೃತಿ ಲೋಕಾರ್ಪಣೆಗೆ ಆರಿಸಿಕೊಂಡಿದ್ದರು.
ಈ ಧನ್ಯತೆಯ ಕ್ಷಣವನ್ನು ಕಾವ್ಯಾತ್ಮಕ ಧಾಟಿಯಲ್ಲಿ ಹೀಗೆ ಬಣ್ಣಿಸಲಾಯಿತು: “ಮನೆಯ ಅಂಗಳದ ಒಲುಮೆಯ ಕುಡಿಯ ಜನ್ಮದಿನದ ಸಂಭ್ರಮಕ್ಕೆ, ಬದುಕಿನ ಸಾರವಿಟ್ಟ ಕಾವ್ಯದ ಉಡುಗೊರೆ ನೀಡಿದ ಕ್ಷಣವಿದು; ಮೊಮ್ಮಗನ ನಗುವಿನ ಹೊಳಪಿನಲ್ಲಿ, ‘ಮಹಾಪಯಣ’ದ ಅಕ್ಷರಗಳು ಜಗಕೆ ಬೆಳಕನು ಹಂಚಲು ಹೊರಟ ಧನ್ಯತೆಯ ಸಮಯವಿದು.ಎಂದು ತಮ್ಮ ಕೌಟುಂಬಿಕ ಸಂತೋಷವನ್ನು ಇಡೀ ಸಾಹಿತ್ಯ ಲೋಕದೊಂದಿಗೆ ಹಂಚಿಕೊಂಡ ಲೇಖಕಿಯ ಈ ಉದಾತ್ತ ಪ್ರಜ್ಞೆಯನ್ನು ನೆರೆದಿದ್ದ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಅತ್ಯಂತ ಹೃತೂರ್ವಕವಾಗಿ ಶ್ಲಾಘಿಸಿ, ಮಗುವಿಗೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಅವರು, ಲೇಖಕಿಯ ಕಾವ್ಯ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಮಂಜುಳಾ ವೆಂಕಟೇಶಯ್ಯ ಅವರನ್ನು ನಾನು ಯಾವಾಗಲೂ ಕವನಗಳ ಕಾರ್ಖಾನೆ (ಪೋಯಟ್ರಿ ಫ್ಯಾಕ್ಟರಿ) ಎಂದೇ ಕರೆಯುತ್ತೇನೆ. ಯಾವುದೇ ವಿಷಯವಾಗಲಿ, ಸಾಮಾಜಿಕ ವಸ್ತುವಾಗಲಿ, ಅದನ್ನು ಕಂಡ ತಕ್ಷಣವೇ, ಆಗಿಂದಾಗಲೇ ಅತ್ಯಂತ ಚಾಕಚಕ್ಯತೆಯಿಂದ ಅದ್ಭುತ ಕವನವಾಗಿ ಪರಿವರ್ತಿಸುವ ಅಪರೂಪದ ಸಿದ್ದಿ ಮತ್ತು ಕ್ಷಿಪ್ರ ಪ್ರತಿಭೆ ಅವರಲ್ಲಿದೆ” ಎಂದು ಪ್ರಶಂಸಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ವಿ. ಬಡಿಗೇರ ಅವರು ಮಾತನಾಡಿ, “ಮಂಜುಳಾ ಅವರು ಕವಿತೆಗಳನ್ನು ಎಷ್ಟು ಅರ್ಥಪೂರ್ಣವಾಗಿ ರಚಿಸುತ್ತಾರೋ, ಅಷ್ಟೇ ಅದ್ಭುತವಾಗಿ, ಶ್ರೋತೃಗಳ ಮನ ಮುಟ್ಟುವಂತೆ ವಾಚಿಸಬಲ್ಲರು. ಅವರ ಕವನ ವಾಚನದ ಶೈಲಿ ಅಮೋಘವಾದದ್ದು. ಕ್ರಾಂತಿಯ ಪ್ರವಾಹದಂತಿರುವ ಶ್ರೀ ವೆಂಕಟೇಶಯ್ಯ ಅವರ ವೈಚಾರಿಕ ಅಬ್ಬರವನ್ನು ಕಾವ್ಯದ ಮೂಲಕ ಶಾಂತಗೊಳಿಸುವುದು ಕೇವಲ ಮಂಜುಳಾ ಅವರಿಗೆ ಮಾತ್ರ ಸಾಧ್ಯ” ಎಂದು ಹಾಸ್ಯದ ಚಟಾಕಿ ಹಾರಿಸುತ್ತಾ ಕವಯಿತ್ರಿಯ ವಾಚನ ಕೌಶಲ್ಯವನ್ನು ಕೊಂಡಾಡಿದರು
ಒಬ್ಬ ಕ್ರಾಂತಿಕಾರಿ ಹೋರಾಟಗಾರನ ಒಡನಾಡಿಯಾಗಿ, ಅಕ್ಷರಗಳ ಮೂಲಕ ವೈಚಾರಿಕ ಹೋರಾಟಕ್ಕೆ ಇಳಿದಾಗ ಆ ಧ್ವನಿಗೆ ಮತ್ತಷ್ಟು ಶಕ್ತಿ ಬರುತ್ತದೆ. ಈ ಕೃತಿಯು ಗದಗಿನ ಸಾಹಿತ್ಯ ಕ್ಷೇತ್ರಕ್ಕೆ ಒಂದು ವಿಶಿಷ್ಟ ಹಾಗೂ ಮೌಲ್ಯಯುತ ಕೊಡುಗೆಯಾಗಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ್ ವಸ್ತ್ರದ ಅವರು ಪ್ರಶಂಸಿಸಿದ್ದಾರೆ.”
ದಲಿತ ಚಳವಳಿಯ ಹಿರಿಯ ಮುಂಚೂಣಿ ನಾಯಕ ವೆಂಕಟೇಶಯ್ಯ ಅವರು ಮಾತನಾಡಿ, ಭಾರತದ ಸಂವಿಧಾನವು ಎಲ್ಲ ಗ್ರಂಥಗಳಿಗೂ ಮಿಗಿಲಾದ ಶ್ರೇಷ್ಠ ಧರ್ಮಗ್ರಂಥ ಎಂಬ ಲೇಖಕಿಯ ದೃಷ್ಟಿಕೋನ ಅತ್ಯಂತ ಶ್ಲಾಘನೀಯ. ಮೀಸಲಾತಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳ ಕುರಿತು ಕೃತಿಯಲ್ಲಿ ಮೂಡಿಬಂದಿರುವ ಧ್ವನಿ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ನಾವೆಲ್ಲರೂ ಭಿನ್ನ-ಭೇದಗಳನ್ನು ಮರೆತು ವೈಚಾರಿಕವಾಗಿ ಒಂದಾಗಬೇಕಿದೆ ಎಂದು ಸಭಿಕರಲ್ಲಿ ವೈಚಾರಿಕ ಚಿಂತನೆ ಮೂಡಿಸಿದರು.
ಕೊಪ್ಪಳದ ಖ್ಯಾತ ಸಾಹಿತಿ ಸಾವಿತ್ರಿ ಮುಜುಮದಾರ್ ಅವರು ಕೃತಿಯನ್ನು ಸುದೀರ್ಘವಾಗಿ ಪರಿಚಯಿಸಿ, ಸಂಕಲನದ ಒಟ್ಟು 61 ಕವಿತೆಗಳ ಆಳ ಹಾಗೂ ಸಾಮಾಜಿಕ ಬದ್ಧತೆಯನ್ನು ಸಭೆಯ ಮುಂದೆ ಅನಾವರಣಗೊಳಿಸಿದರು. *ಕೃತಿಯ ಪ್ರಮುಖ ಆಶಯಗಳು ಹೀಗಿವೆ:* ‘ಅಂಬೇಡ್ಕರ್’ ಕವಿತೆಯಲ್ಲಿ ಶೋಷಿತರ ಮೌನಕ್ಕೆ ಮಾತಾದ ಬಾಬಾಸಾಹೇಬರನ್ನು ಸ್ಮರಿಸುತ್ತಾ, ಸಂವಿಧಾನವೇ ಭಾರತದ ಪರಮೋಚ್ಛ ಧರ್ಮಗ್ರಂಥ ಎಂದು ಎಚ್ಚರಿಸಿದ್ದಾರೆ. ‘ಮನುವಾದದ ವಿಷ ಸರ್ಪ’ ಕವನದಲ್ಲಿ ಶತಮಾನಗಳ ವಿಷಕಾರಿ ಮನುವಾದದ ಹೆಡೆ ಮುರಿಯುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ‘ಕಂಬಾಲಪಲ್ಲಿ’ ಮತ್ತು ‘ನಾವೇಕೆ ಒಪ್ಪಿಕೊಳ್ಳಬೇಕು’ ಕವಿತೆಗಳ ಮೂಲಕ ಜಾತಿ ವ್ಯವಸ್ಥೆ ಹಾಗೂ ಮಡಿ-ಮೈಲಿಗೆಯ ಆಚರಣೆಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗದುಗಿನ ಭೀಷ್ಮ ಕೆರೆಯ ಎತ್ತರದ ಬಸವಣ್ಣನ ವಿಗ್ರಹವನ್ನು ಸಾಮಾನ್ಯರು ಮರೆತು ಹಾದುಹೋಗುವಾಗ, ಕವಯಿತ್ರಿಗೆ ಅಲ್ಲಿ ತಲ್ಲಣಿಸುತ್ತಿರುವ ಬಸವಣ್ಣ ಗೋಚರಿಸಿದ್ದಾನೆ. ವಚನಗಳ ಸಾರವನ್ನು ಪಚನ ಮಾಡಿಕೊಳ್ಳದ ಧರ್ಮಾಂಧ ಗೂಳಿಗಳನ್ನು ಕಂಡು ಬಸವಣ್ಣ ತತ್ತರಿಸುತ್ತಿದ್ದಾನೆ ಮತ್ತು ಮತ್ತೊಂದು ಕಲ್ಯಾಣದ ಕ್ರಾಂತಿಗಾಗಿ ಕಾತರಿಸುತ್ತಿದ್ದಾನೆ ಎಂಬುದನ್ನು ಕಾವ್ಯವಾಗಿಸಿದ್ದಾರೆ.
ಗದುಗಿನ ಗಾಂಧಿಯೆಂದೇ ಹೆಸರಾದ ಅಣ್ಣಿಗೇರಿ ಗುರುಗಳ ನಿಧನದ ನಂತರ ಅನಾಥವಾಗಿರುವ ಆಶ್ರಮ, ಬಿಕ್ಕುತ್ತಿರುವ ಅಕ್ಷರಗಳು ಮತ್ತು ಬಡವಾಗಿರುವ ಬಳಪಗಳ ಸ್ಥಿತಿಯನ್ನು ಕಂಡು ಕವಿಮನ ಕರಗಿದೆ. ಕೋಮುವಾದಿಗಳ ಕಿವಿ ಹಿಂಡಿ ನಿಂತ ಗೌರಿ ಲಂಕೇಶ್ ಅವರ ಧೀರ ವ್ಯಕ್ತಿತ್ವವನ್ನು ಶ್ಲಾಘಿಸುತ್ತಾ, ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ, “ರಣಹೇಡಿಗಳು ರಣಹದ್ದುಗಳಾಗಿ ಕುಕ್ಕಿ ನಿಮ್ಮ ರಕ್ತವನ್ನು ಬಂದೂಕಿನ ನಳಿಕೆ ನೆಕ್ಕಿತೆ, ವಿಕೃತ ಮನುವಾದ ಗಹಗಹಿಸಿ ನಕ್ಕಿದೆ?” ಎಂದು ವ್ಯವಸ್ಥೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
‘ಮತ್ತೆ ಬನ್ನಿ ಬೇಂದ್ರೆ’ ಕವನದಲ್ಲಿ ಶ್ರಾವಣದ ಸಿಂಗಾರಕ್ಕೆ, ಕಡಲಲೆಗಳ ಕಲರವಕ್ಕೆ ಪದವಾಗಲು ಮತ್ತು ನೇಸರನ ನಾದಲೀಲೆಯ ಕಾವ್ಯಧಿ ತರಲು ವರಕವಿಗೆ ಆಹ್ವಾನ ನೀಡಿದ್ದಾರೆ. ‘ಜಾರಿತದೋ ನಕ್ಷತ್ರ’ ಕವನದಲ್ಲಿ ಗುಡಿಸಲಿನಲ್ಲಿ ಗುಲಾಬಿಯ ಅರಳಿಸಿ, ಶೋಷಿತರ ಸೋತ ಬಾಹುಗಳಿಗೆ ಪ್ರಾಣಶಕ್ತಿಯಾಗಿ ನಿಂತ ಆಕಾಶದೆತ್ತರದ ನಕ್ಷತ್ರ ಜಾರಿತಲ್ಲಾ ಎಂದು ಹಲುಬಿದ್ದಾರೆ. ಕುವೆಂಪು ಅವರನ್ನು ಶುದ್ಧತ್ವದ ಶೂದ್ರ, ಅವ್ಯವಸ್ಥೆಯ ವಿರುದ್ಧ ನಿಂತ ರೌದ್ರ ಹಾಗೂ ಲೇಖನಿಯಲ್ಲೇ ಬಂಡಾಯವೆದ್ದ ವೀರ ಎಂದು ಬಣ್ಣಿಸಿ, ಅವರ ವಿಶ್ವಮಾನವ ಸಂದೇಶವನ್ನು ಕೊಂಡಾಡಿದ್ದಾರೆ.
ಹುಲಕೋಟೆಯ ಹುಲಿ ಕೆ.ಎಚ್. ಪಾಟೀಲರನ್ನು ರಾಜಕೀಯ ಕಲಿಯುಗ ಪುರುಷ, ಒಡಲೆಲ್ಲ ಮಣ್ಣಿನ ಗಮಲು ತುಂಬಿಕೊಂಡಿದ್ದ ಧೀಮಂತ ನಾಯಕ ಎಂದು ಕೀರ್ತಿಸಿದ್ದಾರೆ.‘ಸಾವಿತ್ರಿಬಾಯಿ ಫುಲೆ’ ಕವನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ದಂಪತಿಯನ್ನು ಶ್ಲಾಘಿಸಿದ್ದರೆ, ‘ಭಗಿನಿ: ನಿಲ್ಲದ ಪಯಣ’ದಲ್ಲಿ ಹೆಣ್ಣಿನ ವಿವಿಧ ಆಯಾಮಗಳನ್ನು ಕಟ್ಟಿಕೊಟ್ಟಿದ್ದಾರೆ. ‘ಅವ್ವ’, ‘ಅಪ್ಪ’ ಮತ್ತು ‘ತವರು’ ಕವಿತೆಗಳಲ್ಲಿ ಹೆತ್ತವರ ತ್ಯಾಗ ಹಾಗೂ ತವರಿನ ಪ್ರೀತಿಯ ನೆನಪುಗಳನ್ನು ಅತ್ಯಂತ ಭಾವನಾತ್ಮಕವಾಗಿ ವರ್ಣಿಸಿದ್ದಾರೆ.
ಒಟ್ಟಾರೆಯಾಗಿ, ‘ಮಹಾಪಯಣ’ ಕೃತಿಯು ವರ್ತಮಾನದ ರಾಜಕೀಯ ಮತ್ತು ಸಾಮಾಜಿಕ ತಲ್ಲಣಗಳಿಗೆ ತೀಕ್ಷ್ಣವಾಗಿ ಸ್ಪಂದಿಸುವ, ಕನ್ನಡ ಸಾಹಿತ್ಯ ಲೋಕದಲ್ಲಿ ದೀರ್ಘಕಾಲ ದೊಡ್ಡ ಮಟ್ಟದಲ್ಲಿ ಚರ್ಚಿಸಲ್ಪಡುವ ಒಂದು ಮೈಲಿಗಲ್ಲು ಕೃತಿಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಗಣ್ಯರಾದ ಡಿ.ವಿ. ಬಡಿಗೇರ ಹಾಗೂ ಡಾ. ಅರ್ಜುನ ಗೊಳಸಂಗಿ ಉಪಸ್ಥಿತರಿದ್ದರು. ಶ್ರೀಮತಿ ಅನಸೂಯಾ ಮಿಟ್ಟಿ, ಶ್ರೀಮತಿ ಶಿಲ್ಪಾ ಮ್ಯಾಗೇರಿ ಹಾಗೂ ಶ್ರೀಮತಿ ನೀಲಮ್ಮ ಅಂಗಡಿ ಕವನ ವಾಚಿಸಿದರು. ಪ್ರೊ. ದತ್ತ ಪ್ರಸನ್ನ ಪಾಟೀಲ್ ಅವರು ಎಲ್ಲರನ್ನು ಸ್ವಾಗತಿಸಿ ನಿರೂಪಿಸಿ ವಂದಿಸಿದರು
ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಸಾಹಿತ್ಯಾಸಕ್ತರು, ಪ್ರಗತಿಪರ ಚಿಂತಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಕೃಷ್ಣಾ ಎಚ್ ಹಡಪದ
9845650612