ಕರುನಾಡು ಘರ್ಜನೆ ಸುದ್ದಿ ಗದಗ ಶ್ರೀಮತಿ ಮಂಜುಳಾ ವೆಂಕಟೇಶಯ್ಯ ಗದಗ ಅವರ “ಮಹಾ ಪಯಣ” ಕವನ ಸಂಕಲನವು ಅನೇಕ ವೈವಿಧ್ಯಮಯ ವ್ಯಕ್ತಿತ್ವದ ವಿಷಯ ವಿಶೇಷಗಳನ್ನು ಒಳಗೊಂಡ ಸಮಕಾಲೀನ ಸಮಸ್ಯೆಗಳಿಗೆ ಧ್ವನಿಯಾಗಿರುವ ಕವನ ಸಂಕಲನವಾಗಿದೆ.
ಕವನ ಸಂಕಲನವನ್ನು ಮಂಜುಳಾ ಅವರು ಭಾವೈಕ್ಯತೆಯ ತವನಿಧಿ ಗದಗ ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ದಲಿಂಗ ಶ್ರೀಗಳಿಗೆ ಅರ್ಪಣೆ ಮಾಡಿದ್ದಾರೆ.
ತುಮಕೂರಿನ ಡಾ. ಸತ್ಯಮಂಗಲ ಮಹಾದೇವ ಅವರ ಅರ್ಥಪೂರ್ಣ ಮುಡಿಯನ್ನು ಹೊಂದಿರುವ ಈ ಕವನ ಸಂಕಲನವು ನಾಡಿನ ಖ್ಯಾತ ಚಿಂತಕರಾದ ಸುಬ್ಬು ಹೊಲೆಯರ್ ಅವರ ಬೆನ್ನುಡಿಯನ್ನು ಹೊಂದಿದ್ದು ಚಿತ್ತಾಕರ್ಷಕ ಮುಖಪುಟವನ್ನು ಹೊಂದಿದೆ.
ಕವಿಯತ್ರಿ ಈ ಕವನ ಸಂಕಲನದಲ್ಲಿ ಕೇವಲ ತನ್ನ ಭಾವನೆಗಳಿಗೆ ಮಾತ್ರ ಅಕ್ಷರ ರೂಪವನ್ನು ನೀಡದೆ ತನ್ನ ಬದುಕನ್ನು ರೂಪಿಸಲು ಪ್ರೇರಣೆಯಾದ ಮಹಾನ್ ವ್ಯಕ್ತಿಗಳನ್ನು ಎಷ್ಟು ಸ್ಮರಿಸಿಕೊಂಡರು ಅವರಿಗೆ ಸಾಲದೆನಿಸುತ್ತದೆ. ಆ ಮಹಾನ್ ವ್ಯಕ್ತಿಗಳ ಬದುಕು ಹೆಜ್ಜೆ ಹೆಜ್ಜೆಗೂ ಇವರಿಗೆ ಮಾರ್ಗದರ್ಶನ ನೀಡಿದೆ. ಆ ಮಹನೀಯರ ಪಥದಲ್ಲಿ ಅಚಲ ವಿಶ್ವಾಸವನ್ನು ಹೊಂದಿ ತನ್ನ ಬದುಕನ್ನು ಕವಿಯತ್ರಿ ರೂಪಿಸಿಕೊಂಡಿದ್ದಾರೆ ಎನ್ನುವುದನ್ನು ಅವರ ಕವನಗಳು ಸಾಬೀತುಪಡಿಸುತ್ತವೆ.
ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳ ಪ್ರಭಾವ ದಟ್ಟವಾಗಿ ಅವರ ಮೇಲೆ ಆವರಿಸಿದಂತೆ ಕಾಣುತ್ತದೆ. ಆ ಪೂಜ್ಯರ ಕುರಿತು ಅನೇಕ ಕವನಗಳನ್ನು ರಚಿಸಿದ್ದಾರೆ.
ಸತ್ಯದ ನಿಲುವಿಗೆ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮರಾದ ಗಾಂಧೀಜಿ, ಏಸು, ಡಾ. ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಹಾಗೂ ಆದರ್ಶ ರಾಜಕಾರಣಿ ಎನಿಸಿದ
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ದಲಿತ ಕವಿ ಸಿದ್ದಲಿಂಗಯ್ಯ, ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಮಣ್ಯಂ ಅವರ ಕುರಿತಾಗಿಯೂ ಕವನಗಳನ್ನು ರಚಿಸಿರುವರು.
ಶತಶತಮಾನಗಳಿಂದಲೂ ವಿವಿಧ ರೀತಿಯಿಂದ ಶೋಷಣೆಗೊಳಗಾಗಿರುವ ದಲಿತ ಸಮುದಾಯವನ್ನು ಎಚ್ಚರಿಸುವ ಕವನಗಳ ಜೊತೆಗೆ ಪ್ರಕೃತಿ ಪರಿಸರ, ಕರೋನಾ, ಆರೋಗ್ಯ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಕವನಗಳಿವೆ.
21ನೇ ಶತಮಾನದ ವೈಜ್ಞಾನಿಕ ಮತ್ತು ನಾಗರಿಕ ಯುಗದಲ್ಲಿಯೂ ನಿರಂತರವಾಗಿ ಇಂದಿಗೂ ಕಾಡುತ್ತಿರುವ ಜಾತಿ ವ್ಯವಸ್ಥೆಯ ಕರಾಳ ಮುಖಗಳು, ರಾಜ್ಯಶಾಹಿ ಮತ್ತು ಪೌರೋಹಿತ ಶಾಹಿಗಳ ವಿಕಟ ಅಟ್ಟಾಹಾಸಗಳು ಮತಾಂಧತೆ ಹಾಗೂ ಧಾರ್ಮಿಕ ಸಂಕೋಲೆಗಳು ಮಂಜುಳಾ ಅವರನ್ನು ಕಾಡಿವೆ. ಇವುಗಳ ನಿವಾರಣೆಗೆ ಮತ್ತು ಜಾತ್ಯಾತೀತ ಸಾಮರಸ್ಯದ ಸಹಬಾಳ್ವೆಯ ಸಮಾಜಕ್ಕೆ ಬುದ್ಧ ಬಸವ ಮತ್ತು ಅಂಬೇಡ್ಕರ್ ಆದರ್ಶ ಪಥವೆ ಮುಂದಿನ ಕಣ್ಣ ಮುಂದಿನ ಬೆಳಕೆಂದು ಕವಿಯತ್ರಿ ಅಭಿಪ್ರಾಯಪಟ್ಟಿದ್ದಾರೆ.
ತವರು ಮತ್ತು ತವರುವರನ್ನು ಸ್ಮರಿಸಿಕೊಳ್ಳುವ ಕವನಗಳು ಅದೇ ರೀತಿಯಾಗಿ ಹುಟ್ಟಿದ ನೆಲದ ಮೇಲಿನ ಪ್ರೀತಿ ಹಾಗೂ ತಾನು ಬದುಕಿ ಬಾಳುತ್ತಿರುವ ಗದುಗಿನ ಸುತ್ತಮುತ್ತಲ ಪರಿಸರದ ಮೇಲಿನ ಕಾಳಜಿಯನ್ನು ಕವನಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಸಮಕಾಲಿನ ಅನೇಕ ಸಾಮಾಜಿಕ ಸಮಸ್ಯೆಗಳಿಗೂ ಶ್ರೀಮತಿ ಮಂಜುಳಾ ಅವರು ಸ್ಪಂದಿಸಿ ಕವನಗಳನ್ನು ರಚಿಸುವ ಮೂಲಕ ಭರವಸೆಯ ಕವಿಯತ್ರಿಯಾಗಿ “ಮಹಾ ಪಯಣ” ಕವನ ಸಂಕಲನವನ್ನು ಕನ್ನಡಿಗರ ಕೈಗೆ ನೀಡಿದ್ದಾರೆ. ಅವರಿಂದ ಕನ್ನಡ ಕಾವ್ಯಲೋಕಕ್ಕೆ ಇನ್ನು ಉತ್ತಮ ಕೊಡುಗೆ ಸಿಗಲೆಂದು ಹಾರೈಸುತ್ತೇನೆ.
ಗುರು ಚರಣಕ್ಕೆ ಕಾವ್ಯಾರ್ಪಣೆ: ಮಂಜುಳಾ ವೆಂಕಟೇಶಯ್ಯ ಅವರ ‘ಮಹಾ ಪಯಣ’-ಡಾ. ನಿಷ್ಠಿ ರುದ್ರಪ್ಪ,
ಕರುನಾಡು ಘರ್ಜನೆ ಸುದ್ದಿ ಗದಗ ಶ್ರೀಮತಿ ಮಂಜುಳಾ ವೆಂಕಟೇಶಯ್ಯ ಗದಗ ಅವರ “ಮಹಾ ಪಯಣ” ಕವನ ಸಂಕಲನವು ಅನೇಕ ವೈವಿಧ್ಯಮಯ ವ್ಯಕ್ತಿತ್ವದ ವಿಷಯ ವಿಶೇಷಗಳನ್ನು ಒಳಗೊಂಡ ಸಮಕಾಲೀನ ಸಮಸ್ಯೆಗಳಿಗೆ ಧ್ವನಿಯಾಗಿರುವ ಕವನ ಸಂಕಲನವಾಗಿದೆ. ಕವನ ಸಂಕಲನವನ್ನು ಮಂಜುಳಾ ಅವರು ಭಾವೈಕ್ಯತೆಯ ತವನಿಧಿ…