ಕರುನಾಡು ಘರ್ಜನೆ ಸುದ್ದಿ ಕೊಪ್ಪಳ: ತಾಲೂಕಿನ ಮುನಿರಾಬಾದಿನ ತುಂಗಭದ್ರಾ ಡ್ಯಾಂನ ನೂತನ 33 ಸ್ಪಿಲ್ ವೇ ಗೇಟ್ ಲೋಕಾರ್ಪಣೆ ಕಾರ್ಯಕ್ರಮದ ನಂತರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿವಿಧ ಜನಪರ ಮತ್ತು ಶಾಲಾ-ಕಾಲೇಜುಗಳ ಹಿತರಕ್ಷಣಾ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ಉಲ್ಲೇಖಿಸಲಾದ ಪ್ರಮುಖ ಬೇಡಿಕೆಗಳು ಮತ್ತು ಅಂಶಗಳು ಈ ಕೆಳಗಿನಂತಿವೆ:
ರಾಜ್ಯದಲ್ಲಿ ಎಲ್ಲಾ ಅಂಗಡಿಗಳಿಗೆ ಕಂಪ್ಯೂಟರೀಕೃತ ಡಿಜಿಟಲ್ ಬಿಲ್ಲಿಂಗ್ ವ್ಯವಸ್ಥೆಗೆ ಆಗ್ರಹ.
ರಾಜ್ಯದ ಎಲ್ಲಾ ಅಂಗಡಿಗಳಿಗೆ ಕಂಪ್ಯೂಟರೀಕೃತ ಡಿಜಿಟಲ್ ರಶೀದಿ ಕಡ್ಡಾಯಗೊಳಿಸಿ
ರಾಜ್ಯದ ಕಿರಾಣಿ ಸೇರಿದಂತೆ ಸಣ್ಣ, ಮಾಧ್ಯಮ ಹಾಗೂ ದೊಡ್ಡ ಮಳಿಗೆಗಳಲ್ಲಿ ಗ್ರಾಹಕರಿಗೆ ಅಧಿಕೃತ ಜಿಎಸ್‌ಟಿ ಅಥವಾ ವ್ಯಾಪಾರ ಪರವಾನಿಗೆ ಸಂಖ್ಯೆ ಹೊಂದಿರುವ ರಶೀದಿಗಳನ್ನು ನೀಡದೆ, ಕೇವಲ ಬಿಳಿ ಹಾಳೆಯಲ್ಲಿ ಬರೆದು ನೀಡಲಾಗುತ್ತಿದೆ. ಇದರಿಂದ ವ್ಯಾಪಕ ತೆರಿಗೆ ಸೋರಿಕೆಯಾಗಿ ಸರ್ಕಾರದ ಆರ್ಥಿಕತೆಗೆ ದುಷ್ಪರಿಣಾಮ ಬೀರುತ್ತಿದೆ.
ಒತ್ತಾಯ: ಎಲ್ಲಾ ಅಂಗಡಿಗಳಿಗೂ ಕಂಪ್ಯೂಟರೀಕೃತ ಡಿಜಿಟಲ್ ಅಥವಾ ಮುದ್ರಿತ ರಶೀದಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ರಶೀದಿ ನೀಡದ ಅಂಗಡಿಗಳ ವಿರುದ್ಧ ದೂರು ನೀಡಲು ಪ್ರತ್ಯೇಕ ಸಹಾಯವಾಣಿ, ಮೊಬೈಲ್ ವ್ಯಾಟ್ಸಪ್ ಅಥವಾ ಆ್ಯಪ್ (App) ವ್ಯವಸ್ಥೆ ಜಾರಿಗೆ ತರಬೇಕು.
ಮೌಲಾನಾ ಆಜಾದ್ ಶಾಲೆಗಳ ಮೂಲಸೌಕರ್ಯ ವೃದ್ಧಿಗೆ ಆಗ್ರಹ.
ರಾಜ್ಯದಲ್ಲಿ ಮಂಜೂರಾಗಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸ್ವಂತ ಜಾಗ ಮತ್ತು ಸುಸಜ್ಜಿತ ಕಟ್ಟಡದ ಕೊರತೆಯಿದೆ.
ಒತ್ತಾಯ: ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು, ಆಧುನಿಕ ವಿಜ್ಞಾನ ಪ್ರಯೋಗಾಲಯ ಹಾಗೂ ಅತ್ಯಾಧುನಿಕ ಗ್ರಂಥಾಲಯ ಒದಗಿಸಬೇಕು. ಇದರೊಂದಿಗೆ ಖಾಯಂ ಶಿಕ್ಷಕರು ಮತ್ತು ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗಳನ್ನು ಸೃಷ್ಟಿಸಿ ತಕ್ಷಣ ಭರ್ತಿ ಮಾಡಬೇಕು ಎಂದು ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ ಒತ್ತಾಯಿಸಿದೆ.
ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಸುಸಜ್ಜಿತ ಲಾರಿ ಟರ್ಮಿನಲ್ ಮಂಜೂರಾತಿಗೆ ಮನವಿ
ಕೊಪ್ಪಳ ಜಿಲ್ಲೆಯಾಗಿ ಮೂರು ದಶಕಗಳಾಗುತ್ತ ಬಂದರೂ ಲಾರಿ ಹಾಗೂ ಗೂಡ್ಸ್ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿಲ್ಲ. ಇದರಿಂದ ನಗರದ ಒಳರಸ್ತೆಗಳಲ್ಲಿ ವಾಹನ ನಿಲ್ಲಿಸುವುದರಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಿಗೂ ಜಾಗದ ಸಮಸ್ಯೆ ಉಂಟಾಗುತ್ತಿದೆ.
ಒತ್ತಾಯ: ಕೊಪ್ಪಳದ ಮುಂದಿನ 50 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 25 ರಿಂದ 30 ಎಕರೆ ಭೂಮಿಯಲ್ಲಿ ದಿನಕ್ಕೆ ಕನಿಷ್ಠ 400 ರಿಂದ 500 ಬೃಹತ್ ಲಾರಿ.ಗೂಡ್ಸ್ ವಾಹನಗಳು ನಿಲ್ಲಲು ಸಾಧ್ಯವಾಗುವ ಅತ್ಯಾಧುನಿಕ ಲಾರಿ ಟರ್ಮಿನಲ್ ನಿರ್ಮಿಸಬೇಕು. ಅದರಲ್ಲಿ ಚಾಲಕರಿಗೆ ವಿಶ್ರಾಂತಿ ಗೃಹ, ಶೌಚಾಲಯ, ಗ್ಯಾರೇಜ್, ಕ್ಯಾಂಟೀನ್ ಹಾಗೂ ಬ್ಯಾಂಕಿಂಗ್ ಎಟಿಎಂ ಸೌಲಭ್ಯಗಳನ್ನು ಕಲ್ಪಿಸಬೇಕು.
ಕೊಪ್ಪಳದಲ್ಲಿ ಶೈಕ್ಷಣಿಕ ವಲಯ (Educational Zone) ಸ್ಥಾಪನೆಗೆ ಮನವಿ.
ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾದ ಕೊಪ್ಪಳದಲ್ಲಿ ಗುಣಮಟ್ಟದ ಶಿಕ್ಷಣದ ಲಭ್ಯತೆಯಲ್ಲಿ ಪ್ರಾದೇಶಿಕ ಅಸಮತೋಲನವಿದೆ.
ಒತ್ತಾಯ: ಜಿಲ್ಲಾ ಕೇಂದ್ರದಲ್ಲಿ ಒಂದು ನಿರ್ದಿಷ್ಟ ಹಾಗೂ ಸುಸಜ್ಜಿತ ಶೈಕ್ಷಣಿಕ ವಲಯ ಸ್ಥಾಪಿಸಿ, ಕಂಪ್ಯೂಟರೀಕೃತ, ವೃತ್ತಿಪರ ಕೌಶಲ್ಯಾಧಾರಿತ ಕೋರ್ಸ್‌ಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿ ಮಾದರಿ ಹಬ್ ಆಗಿ ರೂಪಿಸಬೇಕು.
ಬೆಂಗಳೂರಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಕಾರ್ಮಿಕ ಮಂಡಳಿ ಹಣ ಬಳಸಬೇಡಿ.
ಬೆಂಗಳೂರಿನಲ್ಲಿ 15 ಲಕ್ಷ ಗಿಡಗಳನ್ನು ನೆಟ್ಟು ಗಿನ್ನಿಸ್ ದಾಖಲೆ ಬರೆಯುವ ಹಸಿರು ಬೆಂಗಳೂರು ಯೋಜನೆಯನ್ನು ಸಂಘಟನೆಗಳು ಮುಕ್ತವಾಗಿ ಬೆಂಬಲಿಸುತ್ತವೆ. ಆದರೆ, ಬಿಡಿಎ (BDA) ಕಾರ್ಯಕ್ರಮಕ್ಕೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಿಂದ 10 ಕೋಟಿ ರೂಪಾಯಿಗಳನ್ನು ಬಳಸುವುದು ಕಾನೂನು ಬಾಹಿರವಾಗಿದೆ.
ಒತ್ತಾಯ: 1996ರ ಕೇಂದ್ರ ಕಾಯ್ದೆಯಡಿ ಸಂಗ್ರಹವಾಗುವ ಸೆಸ್ (Cess) ಹಣವನ್ನು ಕೇವಲ ನೊಂದಾಯಿತ ನಿರ್ಮಾಣ ಕಾರ್ಮಿಕರ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗೆ ಮಾತ್ರ ಬಳಸಲು ಅವಕಾಶವಿದೆ. ಸರ್ಕಾರದ ಇತರ ಇಲಾಖೆಗಳ ಕಾರ್ಯಕ್ರಮಗಳಿಗೆ ಇದನ್ನು ಬಳಸುವುದು ಕಾಯ್ದೆಯ ಉಲ್ಲಂಘನೆಯಾಗುವುದರಿಂದ, ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ ಕಾರ್ಮಿಕರ ನಿಧಿಯನ್ನು ರಕ್ಷಿಸಬೇಕು ಎಂದು ಕಟ್ಟಡ ಕಾರ್ಮಿಕ ಸಂಘಟನೆ (ಐ.ಎಫ್.ಟಿ.ಯು. ಸಂಯೋಜಿತ) ಆಗ್ರಹಿಸಿದೆ.
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವಾಗ ವಿವಿಧ ಜನಪರ ಮತ್ತು ಪ್ರಗತಿಪರ ಸಂಘಟನೆಗಳ ಪ್ರಮುಖ ಮುಖಂಡರಾದ ಎಸ್.ಎ. ಗಫಾರ್, ಬಸವರಾಜ್ ಶೀಲವಂತರ್, ಚನ್ನಬಸಪ್ಪ ಅಪ್ಪಣ್ಣವರ್, ತುಕಾರಾಮ್ ಪಾತ್ರೋಟಿ, ಮೌಲಾ ಹುಸೇನ್ ಹಣಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.