ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ
ಕರುನಾಡು ಘರ್ಜುನೆ ಸುದ್ದಿ ಗದಗ, ಜೂನ್ 30: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತವಾಗಿಸುವ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಕರೆ ನೀಡಿದರು.
ನಗರದ ಪ್ರಖ್ಯಾತ ತ್ರಿವಿಧ ದಾಸೋಹ ಮಠವಾದ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಂಗಳವಾರ (ಜೂನ್ 30) ರಂದು ಪೂಜ್ಯ ಶ್ರೀ ಕಲ್ಲಯ್ಯಜ್ಜನವರಿಗೆ ಎಸ್‌ಐಆರ್ ಎನ್ಯೂಮರೆಶನ್ ನಮೂನೆಯನ್ನು ವಿತರಿಸುವ ಮೂಲಕ ಬಿಎಲ್ಒ ಅವರುಗಳು ಎಸ್‌ಐಆರ್ ನೊಂದಣಿ ಮನೆ ಮನೆ ಭೇಟಿಗೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಐಆರ್ (Special Intensive Revision) ಪ್ರಕ್ರಿಯೆಯ ಉದ್ದೇಶ, ಮಹತ್ವ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ವಿವರವಾಗಿ ಮಾಹಿತಿ ನೀಡಿದರು. ಮತದಾರರ ಪಟ್ಟಿಯಲ್ಲಿ ಹೆಸರುಗಳ ನಿಖರತೆ ಕಾಪಾಡುವುದು, ಅರ್ಹ ಮತದಾರರ ಹೆಸರು ಸೇರ್ಪಡೆ, ಅನರ್ಹ ಅಥವಾ ಪುನರಾವರ್ತಿತ ಹೆಸರುಗಳ ತಿದ್ದುಪಡಿ ಹಾಗೂ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದು ಎಸ್‌ಐಆರ್ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ತಮ್ಮ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಎಸ್‌ಐಆರ್ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಇದರಿಂದ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಮತದಾರರ ಪಟ್ಟಿ ಸಿದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಸಂಸ್ಥೆಗಳ ಮುಖಂಡರು ಜನರಲ್ಲಿ ಎಸ್‌ಐಆರ್ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ಕೈಜೋಡಿಸಬೇಕು. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಜೂನ್ 30 ರಿಂದ ಜುಲೈ 29 ರವರೆಗೆ ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ತದನಂತರ ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದರು.
ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು, ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ 94ಕ್ಕೂ ಅಧಿಕ ನೈಜ ಮತದಾರರನ್ನು ಗುರುತಿಸಿ, ಕುಟುಂಬಗಳ ಲಿಂಕೇಜ್‌ನೊಂದಿಗೆ ಹೊಂದಾಣಿಕೆ ಮಾಡಲಾಗಿದೆ ಎಂದರು.
ಅಕ್ಟೋಬರ್ 7 ರಂದು ಅಂತಿಮ ಮತಪಟ್ಟಿ ಪ್ರಕಟ:
ಮನೆ ಗಣತಿ ತರುವಾಯ ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಮತದಾರ ಪಟ್ಟಿಗೆ ಆಕ್ಷೇಪಣೆಗಳ ಸಲ್ಲಿಕೆಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಅಕ್ಟೋಬರ್ 3 ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳ ಇತ್ಯರ್ಥದ ನಂತರ, ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ನಂತರ ಈಗ ಜಾರಿಯಲ್ಲಿರುವ ಎಲ್ಲಾ ಮತದಾರರ ಪಟ್ಟಿಗಳು ಸಂಪೂರ್ಣವಾಗಿ ರದ್ದಾಗಲಿದ್ದು ಪರಿಷ್ಕೃತ ಮತದಾರರ ಪಟ್ಟಿ ಮಾತ್ರ ಊರ್ಜಿವಾಗುತ್ತದೆ. ಎಂದರು.
ಅಗತ್ಯ ದಾಖಲೆ ಪಡೆದು ಮತಪಟ್ಟಿಗೆ ಸೇರ್ಪಡೆ:
ಕುಟುಂಬದ ಮುಖ್ಯಸ್ಥರ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಹೊಸದಾಗಿ ಅರ್ಹತೆ ಪಡೆಯುವ ಕುಟುಂಬದ ಇತರೆ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಸುಲಭವಾಗುತ್ತದೆ. ಮದುವೆಯಾಗಿ ಅಥವಾ ವಲಸೆ ಬಂದು ಇಲ್ಲಿ ನೆಲೆಸಿರುವವರ ಹೆಸರು ಹಳೆಯ ವೋಟರ್ ಲಿಸ್ಟ್ನಲ್ಲಿ ಇಲ್ಲದಿದ್ದರೆ, ಅವರಿಗೆ ಫ್ಯಾಮಿಲಿ ಲಿಂಕೇಜ್ ಸಿಗುವುದಿಲ್ಲ. ಈ ಹಿಂದೆ ಅವರು ವಾಸವಾಗಿದ್ದ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದ್ದರೆ, ಆ ಮಾಹಿತಿ ಅನುಸಾರ ಹೆಸರು ಸೇರ್ಪಡೆ ಮಾಡಬಹುದು. ಮ್ಯಾಪಿಂಗ್ ಆಗದೆ ಇರುವವರು ಮನೆ ಗಣತಿ ಫಾರಂ ಜೊತೆ ಚುನಾವಣಾ ಆಯೋಗ ನಿಗದಿಪಡಿಸಿದ ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜಿಕ ಉದ್ಯಮಗಳು ನಿಯಮಿತ ಉದ್ಯೋಗಿ ಗುರುತಿನ ಚೀಟಿ, ಪಿಂಚಣಿ ಆದೇಶ ಅಥವಾ ಗುರುತಿನ ಚೀಟಿ, 1 ಜುಲೈ 1987ಕ್ಕಿಂತ ಮೊದಲು ಭಾರತದಲ್ಲಿ ಸರ್ಕಾರಿ, ಸ್ಥಳೀಯ ಪ್ರಾಧಿಕಾರ, ಬ್ಯಾಂಕ್,ಅಂಚೆಕಚೇರಿ, ಎಲ್.ಐ.ಸಿ ಉದ್ಯಮಗಳಿಂದ ನೀಡಲಾದ ಯಾವುದೇ ಗುರುತಿನ ಚೀಟಿ, ಪ್ರಮಾಣ ಪತ್ರ ಅಥವಾ ದಾಖಲೆ, ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಮೆಟ್ರಿಕ್ಯೂಲೇಶನ್ (ಎಸ್.ಎಸ್.ಎಲ್.ಸಿ) ಶೈಕ್ಷಣಿಕ ಪ್ರಮಾಣ ಪತ್ರ, ಶಾಶ್ವತ ನಿವಾಸ ಪ್ರಮಾಣ ಪತ್ರ, ಅರಣ್ಯ ಹಕ್ಕು ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ರಾಷ್ಟ್ರೀಯ ನಾಗರಿಕರ ನೋಂದಣಿ, ಕುಟುಂಬ ನೊಂದಣಿ, ಭೂಮಿ ಮನೆ ಹಂಚಿಕೆ ಪ್ರಮಾಣ ಪತ್ರ ಸಲ್ಲಿಸಬಹುದು. ಇದರೊಂದಿಗೆ ಆಧಾರ್ ಕಾರ್ಡನ್ನು ಗುರುತಿನ ಪುರಾವೆಯಾಗಿ ಮಾತ್ರ ನೀಡಬಹುದು. ಇವುಗಳನ್ನು ಪಡೆದು ಮತಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಶಿಲ್ದಾರರ ಶ್ರೀನಿವಾಸ್ ಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಇತರರು ಇದ್ದರು.
ಬಾಕ್ಸ್ :
ಚುನಾವಣಾ ಆಯೋಗದ ಈ ಮಹತ್ವದ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಸಮಾಜದ ಎಲ್ಲ ವರ್ಗದ ಜನರು ತಮ್ಮ ಮತದಾರರ ಮಾಹಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ಕರ್ತವ್ಯ ನಿರ್ವಹಿಸಬೇಕು.
– ಪೂಜ್ಯ ಶ್ರೀ ಕಲ್ಲಯ್ಯಜ್ಜನವರು, ವಿರೇಶ್ವರ ಪುಣ್ಯಾಶ್ರಮ, ಗದಗ