ಕರುನಾಡು ಘರ್ಜುನೆ ಸುದ್ದಿ ಗದಗ: ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪ್ರಾಚ್ಯವಸ್ತು ಇಲಾಖೆಯ ಅಧೀನದ ಐತಿಹಾಸಿಕ ಶ್ರೀ ಸರಸ್ವತಿ ಮೂರ್ತಿಯನ್ನು ನಿಧಿ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಕಬ್ಬಿಣದ ಸಲಕರಣೆಯಿಂದ ಹೊಡೆದು ವಿರೂಪಗೊಳಿಸಿದ್ದ ಪ್ರಕರಣವನ್ನು ಗದಗ ನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಉಪಕರಣಗಳು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 10ರಂದು ಮಧ್ಯಾಹ್ನ ನಡೆದ ಈ ಕೃತ್ಯದ ಸಂಬಂಧ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ ಜಗದೀಶ (ಐಪಿಎಸ್) ಹಾಗೂ ಉಪ ಪೊಲೀಸ್ ಅಧೀಕ್ಷಕ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಸಂಗಮೇಶ ವಿ. ಶಿವಯೋಗಿ ನೇತೃತ್ವದ ತಂಡ ಜುಲೈ 16ರಂದು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು.
ಬಂಧಿತ ಆರೋಪಿಗಳು ಬಾಳೇಶ ಕಳಸಣ್ಣವರ, ಆಸೀಫ್ ಭಾಗವಾನ, ಬಸು ಸಂಡೂರ ಹಾಗೂ ರಾಜೇಸಾಬ ನದಾಫ್ ಎಂದು ಗುರುತಿಸಲಾಗಿದೆ.
ಪೊಲೀಸರ ವಿಚಾರಣೆಯಲ್ಲಿ, ‘ಮಂತ್ರ ಸಿದ್ಧಿ’ ಪುಸ್ತಕ ಓದಿದ ಬಳಿಕ ಸರಸ್ವತಿ ಮೂರ್ತಿಯೊಳಗೆ ನಿಧಿ ಅಡಗಿದೆ ಎಂದು ನಂಬಿದ ಬಾಳೇಶ ಕಳಸಣ್ಣವರ ತನ್ನ ಸಹಚರರೊಂದಿಗೆ ಸಂಚು ರೂಪಿಸಿ ಗದಗಕ್ಕೆ ಬಂದು ಮೂರ್ತಿಗೆ ಕಬ್ಬಿಣದ ಸಾಧನದಿಂದ ಹೊಡೆದು ವಿರೂಪಗೊಳಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪ್ರಕರಣದಲ್ಲಿ ಬಳಸಿದ ಕಬ್ಬಿಣದ ಉಪಕರಣಗಳು ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಿಠಲ್ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.