ಕರುನಾಡು ಘರ್ಜುನೆ ಸುದ್ದಿ ಗದಗ: ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ರೌಡಿಶೀಟರ್ ಸದಾನಂದಸಿಂಗ್ ತಂದೆ
ಶಿವಾನಂದಸಿಂಗ್ ಗುರ್ಲಹೊಸೂರ (ನಿವಾಸಿ: ಗದಗ) ವಿರುದ್ಧ ಗದಗ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಗದಗ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಸದಾನಂದಸಿಂಗ್ ವಿರುದ್ಧ ಈ ಹಿಂದಿನಿಂದಲೂ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರೂ ತನ್ನ ವರ್ತನೆಯಲ್ಲಿ ಯಾವುದೇ ಬದಲಾವಣೆ ತರದೆ ನಿರಂತರವಾಗಿ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಆತನ ದುಷ್ಕೃತ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸಂಬಂಧಪಟ್ಟ ಪೊಲೀಸ್ ಠಾಣೆಯವರು ಗಡಿಪಾರು ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಕರಣದ ಸಂಪೂರ್ಣ ದಾಖಲೆಗಳು ಹಾಗೂ ಆರೋಪಗಳ ಗಂಭೀರತೆಯನ್ನು ಪರಿಶೀಲಿಸಿದ ಬಳಿಕ, ಅಧಿಕಾರಿಗಳು ಸದಾನಂದಸಿಂಗ್‌ರನ್ನು ಗದಗ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡುವ ಆದೇಶ ನೀಡಿದ್ದಾರೆ.
ಸದಾನಂದಸಿಂಗ್ ವಿರುದ್ಧ ಕೊಲೆಗೆ ಯತ್ನ, ಗಲಭೆ, ಮಾರಕಾಸ್ತ್ರಗಳಿಂದ ಹಲ್ಲೆ, ಶಾಂತಿಭಂಗ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಅತಿಕ್ರಮ ಪ್ರವೇಶ, ಉದ್ದೇಶಪೂರ್ವಕ ಅವಮಾನ, ಬಲವಂತವಾಗಿ ಅಡ್ಡಗಟ್ಟುವುದು, ದೊಂಬಿ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳಡಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.
ದಾಖಲಾದ ಪ್ರಮುಖ ಪ್ರಕರಣಗಳು:
ಅಪರಾಧ ಸಂಖ್ಯೆ 123/2016
ಅಪರಾಧ ಸಂಖ್ಯೆ 131/2016
ಅಪರಾಧ ಸಂಖ್ಯೆ 132/2016
ಅಪರಾಧ ಸಂಖ್ಯೆ 15/2017
ಅಪರಾಧ ಸಂಖ್ಯೆ 128/2025
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಮುಂದುವರಿಯಲಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಈ ಕ್ರಮ ಖಡಕ್ ಎಚ್ಚರಿಕೆಯಾಗಿದ್ದು, ಇಂತಹ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗುವ ಯಾವುದೇ ವ್ಯಕ್ತಿಯ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.