ಕರುನಾಡು ಘರ್ಜುನೆ ಸುದ್ದಿ ಗದಗ, ಆ.5: ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಸುಮಾರು 25 ರಿಂದ 28 ವರ್ಷದ ಅನಾಮಧೇಯ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು, ಶವವನ್ನು ಕೃಷಿ ಹೊಂಡದಲ್ಲಿ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಲ್ಲಾಪೂರ ಗ್ರಾಮ ಪಂಚಾಯತ್ ಸದಸ್ಯ ಮಲ್ಲಿಕಾರ್ಜುನ ಶಿವಪುತ್ರಪ್ಪ ಅರಹುಣಸಿ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಆಗಸ್ಟ್ 3ರ ಬೆಳಿಗ್ಗೆ 9.30 ಗಂಟೆಯಿಂದ ಆಗಸ್ಟ್ 4ರ ಬೆಳಿಗ್ಗೆ 8.20 ಗಂಟೆಯ ನಡುವಿನ ಅವಧಿಯಲ್ಲಿ ಅಪರಿಚಿತರು ಮಲ್ಲಾಪೂರ ಗ್ರಾಮದ ಅಂದಪ್ಪ ಭೀಮಪ್ಪ ಕೌಜಗೇರಿ ಅವರ ಹೊಲದಲ್ಲಿ ಯುವತಿಯನ್ನು ಕಲ್ಲಿನಿಂದ ತಲೆಗೆ ಜಜ್ಜಿ, ಬಳಿಕ ಕೊರಳಿನ ದಾರ ಹಾಗೂ ತಾಳಿ ಸರವನ್ನು ಎಳೆದು ಭೀಕರವಾಗಿ ಕೊಲೆ ಮಾಡಿದ್ದಾರೆ.
ನಂತರ ಕೊಲೆ ನಡೆದಿರುವುದು ಯಾರಿಗೂ ತಿಳಿಯದಂತೆ ಸಾಕ್ಷ್ಯಾಧಾರಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಶವವನ್ನು ಅದೇ ಹೊಲದಲ್ಲಿರುವ ಕೃಷಿ ಹೊಂಡಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 150/2026ರಡಿ ಬಿಎನ್‌ಎಸ್-2023ರ ಕಲಂ 103(1) ಹಾಗೂ 238 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಮೃತ ಮಹಿಳೆಯ ವಿವರ:
ವಯಸ್ಸು: ಸುಮಾರು 25 ರಿಂದ 28 ವರ್ಷ
ಎತ್ತರ: ಸುಮಾರು 5 ಅಡಿ
ಮೈಬಣ್ಣ: ಸಾಧಾರಣ ಕಪ್ಪು ಮೈಬಣ್ಣ
ಮುಖ: ದುಂಡು ಮುಖ
ಉಡುಗೆ: ಕಪ್ಪು ಬಣ್ಣದ ಜಂಪರ್, ಕೆಂಪು ಬಣ್ಣದ ಲಂಗಾ
ಧರಿಸಿದ್ದ ಆಭರಣಗಳು:
ಕೊರಳಲ್ಲಿ ಬಂಗಾರದ ಮಾದರಿಯ ತಾಳಿ
ಕಪ್ಪು ಬಣ್ಣದ ದಾರದಲ್ಲಿ ಕಲಾವತಿ ಮಾತೆಯ ಲಾಕೆಟ್
ಎರಡೂ ಕೈಗಳಲ್ಲಿ ಹಸಿರು ಬಳೆಗಳು ಹಾಗೂ ಬಂಗಾರದ ಮಾದರಿಯ ಎರಡು ಬಳೆಗಳು
ಎರಡೂ ಕಾಲುಗಳಲ್ಲಿ ಬೆಳ್ಳಿಯ ಕಾಲುಚೈನ್ ಮತ್ತು ಕಾಲುಂಗುರ
ಎರಡೂ ಕಿವಿಗಳಲ್ಲಿ ಬಂಗಾರದ ಮಾದರಿಯ ಓಲೆಗಳು
ಈ ಮಹಿಳೆಯ ಗುರುತು ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇರುವವರು ತಕ್ಷಣವೇ ರೋಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.