ಕರುನಾಡು ಘರ್ಜುನೆ ಸುದ್ದಿ ಗದಗ: ಬೆಳೆ ಹಾನಿ ಕುರಿತು ತಮ್ಮ ಅಹವಾಲು ಸಲ್ಲಿಸಲು ಜಿಲ್ಲಾ ಕಚೇರಿಗೆ ಬಂದಿದ್ದ ರೈತರೊಂದಿಗೆ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಮಾತಿನ ವೇಳೆ ಧ್ವನಿ ಎತ್ತಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಮೊನ್ನೆ ನಡೆದ ಘಟನೆಯಲ್ಲಿ, ಬೆಳೆ ಹಾನಿಯಿಂದ ಸಂಕಷ್ಟದಲ್ಲಿದ್ದ ರೈತರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ವೇಳೆ ಮಾತಿನ ಚಕಮಕಿ ಉಂಟಾಗಿ, ಜಿಲ್ಲಾಧಿಕಾರಿಗಳು ರೈತರೊಂದಿಗೆ ಕಠಿಣ ಧಾಟಿಯಲ್ಲಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ರೈತ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.
ಘಟನೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಯಾವುದೇ ಉದ್ದೇಶಪೂರ್ವಕವಾಗಿ ರೈತರ ಮನಸ್ಸಿಗೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ತಮ್ಮ ವರ್ತನೆಯಿಂದ ರೈತರಿಗೆ ಬೇಸರವಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಹಾಗೂ ರೈತರಿಗೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕ್ಷಮೆಯಾಚನೆಯ ಬಳಿಕ ಈ ವಿಚಾರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಮುಂದಿನ ಬೆಳವಣಿಗೆಗಳತ್ತ ಗಮನ ಹರಿಸಿದ್ದಾರೆ.