ಕರುನಾಡು ಘರ್ಜನೆ ಸುದ್ದಿ ಬಳ್ಳಾರಿ: ನಗರದ ವೀರಶೈವ ವಿದ್ಯಾವರ್ಧಕ ಸಂಘದ ಹೀರದಸೂಗಮ್ಮ ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದು, ಇದರಿಂದಾಗಿ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಆಶೀರ್ವಚನವನ್ನು ಅರ್ಧಕ್ಕೆ ಮೊಟಕುಗೊಳಿಸಿ ವೇದಿಕೆಯಿಂದ ನಿರ್ಗಮಿಸಿದ ಘಟನೆ ನಡೆದಿದೆ.
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ವ್ಯವಸ್ಥೆಯಲ್ಲಿ ಅಡಚಣೆ ಕಾಣಿಸಿಕೊಂಡಿದ್ದಲ್ಲದೆ, ವೇದಿಕೆಯಲ್ಲಿಯೂ ಗದ್ದಲದ ವಾತಾವರಣ ಕಂಡುಬಂದಿತು. ಈ ನಡುವೆಯೂ ಗವಿಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಆಶೀರ್ವಚನವನ್ನು ಮುಂದುವರಿಸಿದ್ದರು.
ಈ ವೇಳೆ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ನಾರಾ ಭರತ್‌ರೆಡ್ಡಿ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ, ನಿರೂಪಕರು ಅತಿಥಿಗಳ ಆಗಮನದ ಕುರಿತು ಪದೇಪದೇ ಘೋಷಣೆ ಮಾಡತೊಡಗಿದರು. ಇದರಿಂದ ಅಸಮಾಧಾನಗೊಂಡ ಸ್ವಾಮೀಜಿ ಅವರು ತಮ್ಮ ಆಶೀರ್ವಚನವನ್ನು ಮೊಟಕುಗೊಳಿಸಿದರು.
ನಂತರ ಮೈಕ್‌ನ್ನು ಸಚಿವ ಈಶ್ವರ ಖಂಡ್ರೆ ಅವರಿಗೆ ಹಸ್ತಾಂತರಿಸಿದ ಸ್ವಾಮೀಜಿ, ಕಾರ್ಯಕ್ರಮದಲ್ಲಿ ತಮಗೆ ನೀಡಲಾಗಿದ್ದ ದೇಣಿಗೆಯನ್ನೂ ವಾಪಸ್ ನೀಡಿ ವೇದಿಕೆಯಿಂದ ಹೊರನಡೆದರು.
ಘಟನೆಯಿಂದಾಗಿ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸ್ವಾಮೀಜಿಗಳ ನಿರ್ಗಮನವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಗಮನ ಸೆಳೆಯಿತು.
ದೇಣಿಗೆ ಹಣವನ್ನು ವಾಪಸ್ ಮಾಡಿದ ಸ್ವಾಮೀಜಿ