ಕರುನಾಡು ಘರ್ಜುನೆ ಸುದ್ದಿ ಗದಗ: ರಾಜ್ಯ ಸರ್ಕಾರವು ಗುಟ್ಕಾ ಸೇರಿದಂತೆ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳ ಮೇಲೆ ನಿಷೇಧ ಹೇರಿರುವ ಕ್ರಮವನ್ನು ಪಕ್ಷಭೇದ ಮರೆತು ಎಲ್ಲರೂ ಸ್ವಾಗತಿಸಬೇಕು ಎಂದು ಪಾಸ್ಟರ್ ಫ್ರಾನ್ಸಿಸ್ ಕನ್ನಯ್ಯ, ಗದಗ ಅವರು ಆಗ್ರಹಿಸಿದ್ದಾರೆ.
ಆದರೆ, ಸರ್ಕಾರದ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಕೆಲವು ರಾಜಕೀಯ ನಾಯಕರು, ಶಾಸಕರು ಹಾಗೂ ವಿವಿಧ ಮುಖಂಡರು ಒತ್ತಾಯಿಸುತ್ತಿರುವುದು ಅತ್ಯಂತ ದುಃಖಕರ ಹಾಗೂ ಚಿಂತಾಜನಕ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ವಿಶೇಷವಾಗಿ ಯುವಜನತೆ ಇಂತಹ ವ್ಯಸನಗಳಿಗೆ ಬಲಿಯಾಗದಂತೆ ತಡೆಯುವುದು ಸರ್ಕಾರದಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಷೇಧದಿಂದ ಉದ್ಯಮ ಅಥವಾ ರೈತರಿಗೆ ತೊಂದರೆಯಾಗುತ್ತದೆ ಎಂಬ ವಾದವನ್ನು ಮುಂದಿಟ್ಟುಕೊಂಡು ನಿಷೇಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸುವ ಮೊದಲು, ಈ ಉತ್ಪನ್ನಗಳಿಂದ ಅನಾರೋಗ್ಯಕ್ಕೊಳಗಾಗುವ ಜನರು ಮತ್ತು ಅವರ ಕುಟುಂಬಗಳು ಅನುಭವಿಸುವ ನೋವು ಹಾಗೂ ಆರ್ಥಿಕ ಹೊರೆಯನ್ನೂ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
“ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಎಲ್ಲರೂ ಒಂದಾಗಬೇಕು”
ಗುಟ್ಕಾ ನಿಷೇಧದಂತಹ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವನ್ನು ಪಕ್ಷ ರಾಜಕಾರಣದ ದೃಷ್ಟಿಯಿಂದ ನೋಡದೆ, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ದೃಷ್ಟಿಯಿಂದ ನೋಡಬೇಕು ಎಂದು ಪಾಸ್ಟರ್ ಫ್ರಾನ್ಸಿಸ್ ಕನ್ನಯ್ಯ ಮನವಿ ಮಾಡಿದ್ದಾರೆ.
ಮಠಮಾನ್ಯಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ನಿಂತು ವ್ಯಸನಮುಕ್ತ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದ್ದಾರೆ.
“ಮದ್ಯಪಾನ, ಧೂಮಪಾನ ಮತ್ತು ಗುಟ್ಕಾದಂತಹ ವ್ಯಸನಕಾರಿ ಉತ್ಪನ್ನಗಳಿಂದ ನಮ್ಮ ಸಮಾಜವನ್ನು ಮುಕ್ತಗೊಳಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು. ಸ್ವಚ್ಛ ಭಾರತ ಎಂದರೆ ಕೇವಲ ಪರಿಸರ ಸ್ವಚ್ಛತೆ ಮಾತ್ರವಲ್ಲ; ಆರೋಗ್ಯಕರ ಮತ್ತು ವ್ಯಸನಮುಕ್ತ ಭಾರತವೂ ಆಗಬೇಕು” ಎಂದು ಅವರು ಹೇಳಿದ್ದಾರೆ.
ಮುಂಬರುವ ಪೀಳಿಗೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೈಗೊಳ್ಳುವ ಸಾರ್ವಜನಿಕ ಆರೋಗ್ಯ ಪರವಾದ ಕ್ರಮಗಳಿಗೆ ಸಮಾಜದ ಎಲ್ಲ ವರ್ಗಗಳು ಬೆಂಬಲ ನೀಡಬೇಕು. ವ್ಯಾಪಾರಕ್ಕಿಂತ ಆರೋಗ್ಯ, ಲಾಭಕ್ಕಿಂತ ಜೀವ, ರಾಜಕೀಯಕ್ಕಿಂತ ಸಾರ್ವಜನಿಕ ಹಿತವೇ ಶ್ರೇಷ್ಠ ಎಂಬ ಮನೋಭಾವ ನಮ್ಮೆಲ್ಲರಲ್ಲೂ ಬೆಳೆಬೇಕು ಎಂದು ಪಾಸ್ಟರ್ ಫ್ರಾನ್ಸಿಸ್ ಕನ್ನಯ್ಯ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ಜನರು ಕೇವಲ ರಾಜಕೀಯ ಸ್ವಾತಂತ್ರ್ಯವನ್ನಷ್ಟೇ ಆಚರಿಸದೆ, ವ್ಯಸನಗಳಿಂದಲೂ ನಮ್ಮ ಯುವಜನತೆ ಮತ್ತು ಸಮಾಜಕ್ಕೆ ಸ್ವಾತಂತ್ರ್ಯ ನೀಡುವ ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.
pastor ಫ್ರಾನ್ಸಿಸ್ ಕನ್ನಯ್ಯ, ಗದಗ
ಮಾಜಿ ಉಪಾಧ್ಯಕ್ಷರು,
ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ.ವರದಿ:
.