ಕರುನಾಡು ಘರ್ಜನೆ ಸುದ್ದಿ ಬೆಂಗಳೂರು I ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಶಾಸಕಾಂಗದ ಸದಸ್ಯರ ವಿರುದ್ಧ ಇರುವ ಗಂಭೀರ ಅಪರಾಧ ಪ್ರಕರಣಗಳ ಕುರಿತು ವ್ಯಕ್ತವಾದ ಕಳವಳವು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ದೇಶದಲ್ಲಿ ಹಲವಾರು ವರುಷಗಳಿಂದ ಹೀಗೆ ಅಪರಾಧದ ಆರೋಪ ಹೊತ್ತ ರಾಜಕಾರಾಣಿಗಳು ಅಧಿಕಾರದಲ್ಲಿ ಬರುತಿರುವುದು ಸಹಜವಾಗಿದೆ. ಆದರೆ ಸರ್ವೋಚ್ಚ ನ್ಯಾಯಾಲಯ ಈ ಬಾರಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಯಂದು ಕಾಣುತ್ತದೆ.
“ವಿಧಾನಸಭೆ ಎಂದರೆ ಕಾನೂನು ರೂಪಿಸುವ ಪವಿತ್ರ ಪ್ರಜಾಪ್ರಭುತ್ವದ ವೇದಿಕೆ. ಆದರೆ ಅದೇ ಸದನಕ್ಕೆ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವವರ ಪ್ರವೇಶ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ. ಇಂದು ಕೊಲೆ ಪ್ರಕರಣ, ನಾಳೆ ಕೊಲೆ ಯತ್ನ, ಮತ್ತೊಂದು ದಿನ ಮಹಿಳೆಯರ ವಿರುದ್ಧದ ಗಂಭೀರ ಅಪರಾಧಗಳ ಪ್ರಕರಣಗಳನ್ನು ಎದುರಿಸುತ್ತಿರುವವರು ಜನಪ್ರತಿನಿಧಿಗಳಾಗಿ ಸದನ ಪ್ರವೇಶಿಸುವ ಪರಿಸ್ಥಿತಿ ಮುಂದುವರಿದರೆ, ನಮ್ಮ ಶಾಸಕಾಂಗದ ಘನತೆ ಮತ್ತು ಜನರ ವಿಶ್ವಾಸದ ಗತಿ ಏನು?” ಎಂದು ಪ್ರಶ್ನಿಸಿದರು.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಕಟಿಸಿರುವ 2025ರ ವರದಿಯನ್ನು ಉಲ್ಲೇಖಿಸಿದ ತಾಹೇರ್ ಹುಸೇನ್ ಅವರು, ದೇಶದ 28 ರಾಜ್ಯ ವಿಧಾನಸಭೆಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 4,092 ಹಾಲಿ ಶಾಸಕರ ಪೈಕಿ 1,861 ಮಂದಿ (45%) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿದ್ದಾರೆ. 1,205 ಮಂದಿ (29%) ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ಹೇಳಿದರು.
ಅದೇ ವರದಿಯ ಪ್ರಕಾರ 54 ಶಾಸಕರು ಕೊಲೆ ಪ್ರಕರಣಗಳನ್ನು, 226 ಶಾಸಕರು ಕೊಲೆ ಯತ್ನದ ಪ್ರಕರಣಗಳನ್ನು ಮತ್ತು 127 ಶಾಸಕರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. 13 ಶಾಸಕರು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿರುವುದೂ ವರದಿಯಲ್ಲಿ ಉಲ್ಲೇಖವಾಗಿದೆ.
“ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬೇಕು. ಯಾರ ವಿರುದ್ಧವೂ ಪ್ರಕರಣ ದಾಖಲಾಗಿರುವುದರಿಂದ ಮಾತ್ರ ಅವರನ್ನು ಅಪರಾಧಿ ಎಂದು ಕರೆಯಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಪ್ರತಿಯೊಬ್ಬರಿಗೂ ಕಾನೂನುಬದ್ಧ ನಿರಪರಾಧಿತ್ವದ ಹಕ್ಕಿದೆ. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕ್ರಿಮಿನಲ್ ಹಾಗೂ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರು ಶಾಸಕಾಂಗಕ್ಕೆ ಆಯ್ಕೆಯಾಗುತ್ತಿರುವುದು ಮಾತ್ರ ಸಾರ್ವಜನಿಕ ಚರ್ಚೆಗೆ ಒಳಪಡಲೇಬೇಕು,” ಎಂದು ಅವರು ಹೇಳಿದರು.
ಕರ್ನಾಟಕದಲ್ಲಿಯೂ ಪರಿಸ್ಥಿತಿ ಆತಂಕಕಾರಿಯಾಗಿದೆ. ADR ವರದಿಯ ಪ್ರಕಾರ ರಾಜ್ಯದ 122 ಶಾಸಕರು (55%) ಕ್ರಿಮಿನಲ್ ಪ್ರಕರಣಗಳನ್ನು ಮತ್ತು 72 ಶಾಸಕರು (32%) ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.
“ಇದು ಯಾವುದೇ ಒಂದು ಪಕ್ಷದ ಸಮಸ್ಯೆಯಲ್ಲ. ಬಹುತೇಕ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಲ್ಲಿಯೂ ಇಂತಹ ಹಿನ್ನೆಲೆ ಕಂಡುಬರುತ್ತಿದೆ. ಆದ್ದರಿಂದ ರಾಜಕೀಯ ಪಕ್ಷಗಳು ‘ಗೆಲ್ಲುವ ಸಾಮರ್ಥ್ಯ’ವನ್ನಷ್ಟೇ ಮಾನದಂಡವನ್ನಾಗಿ ಮಾಡದೆ, ಅಭ್ಯರ್ಥಿಗಳ ಸಾರ್ವಜನಿಕ ಹಿನ್ನೆಲೆ, ನೈತಿಕತೆ ಮತ್ತು ಅವರ ವಿರುದ್ಧದ ಗಂಭೀರ ಪ್ರಕರಣಗಳನ್ನೂ ಪರಿಗಣಿಸಬೇಕು,” ಎಂದು ತಾಹೇರ್ ಹುಸೇನ್ ಆಗ್ರಹಿಸಿದರು.
ಅವರು ಮುಂದುವರಿಸಿ,
“ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಮತದಾರರಿಗೆ ಅಭ್ಯರ್ಥಿಯ ಸಂಪೂರ್ಣ ಹಿನ್ನೆಲೆ, ಬಾಕಿ ಇರುವ ಪ್ರಕರಣಗಳು ಮತ್ತು ಆರೋಪಗಳ ಬಗ್ಗೆ ಸ್ಪಷ್ಟ ಹಾಗೂ ಸುಲಭವಾಗಿ ಅರ್ಥವಾಗುವ ಮಾಹಿತಿ ದೊರೆಯಬೇಕು. ರಾಜಕೀಯ ಪಕ್ಷಗಳು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ, ಅದರ ಕಾರಣವನ್ನೂ ಸಾರ್ವಜನಿಕವಾಗಿ ವಿವರಿಸುವ ವ್ಯವಸ್ಥೆ ಬರಬೇಕು,” ಎಂದರು.
ಜನಪ್ರತಿನಿಧಿಗಳ ವಿರುದ್ಧದ ಗಂಭೀರ ಪ್ರಕರಣಗಳ ವಿಚಾರಣೆ ವರ್ಷಗಳ ಕಾಲ ಬಾಕಿ ಉಳಿಯದಂತೆ ತ್ವರಿತ ನ್ಯಾಯಾಂಗ ಪ್ರಕ್ರಿಯೆಗೆ ಪರಿಣಾಮಕಾರಿ ವ್ಯವಸ್ಥೆ ರೂಪಿಸಬೇಕು. ಅದೇ ಸಂದರ್ಭದಲ್ಲಿ ರಾಜಕೀಯದ ಅಪರಾಧೀಕರಣವನ್ನು ತಡೆಯಲು ಚುನಾವಣಾ ಸುಧಾರಣೆಗಳ ಕುರಿತು ಗಂಭೀರ ಚರ್ಚೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
“ಶಾಸಕಾಂಗವು ಜನರ ವಿಶ್ವಾಸದ ಪ್ರತೀಕ. ಅಪರಾಧದ ಆರೋಪಗಳ ನೆರಳಿನಲ್ಲಿ ಅದರ ಘನತೆ ಕುಂದಬಾರದು. ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕಿಂತ ಜನರ ವಿಶ್ವಾಸವೇ ಮುಖ್ಯ. ರಾಜಕೀಯವನ್ನು ಮೌಲ್ಯಾಧಾರಿತವಾಗಿ, ಸ್ವಚ್ಛವಾಗಿ ಮತ್ತು ಜನಕೇಂದ್ರಿತವಾಗಿ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ,” ಎಂದು ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಹೇಳಿದರು.