ಕರುನಾಡು ಘರ್ಜನೆ ಸುದ್ದಿ ಗದಗ 06: ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ಗದಗ ಜಿಲ್ಲೆಗೆ, ವಿಶೇಷವಾಗಿ ಗದಗ ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ರೈಲು ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಬೇಕು ಎಂದು ಭಾರತೀಯ ಸೇವಾ ಸಮಿತಿಯ ಉತ್ತರ ಕರ್ನಾಟಕ ಅಧ್ಯಕ್ಷರಾದ ಫಾಸ್ಟರ್ ಫ್ರಾನ್ಸಿಸ್ ಕನಯ್ಯ ರವರು ಸಾರ್ವಜನಿಕರ ಪರವಾಗಿ ಒತ್ತಾಯಿಸಿದ್ದಾರೆ.
ಈಗಾಗಲೇ ಗದಗ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹಾಗೂ ಸಂಸದರು ಹೇಳುತ್ತಿದ್ದರೂ, ಪ್ರಯಾಣಿಕರಿಗೆ ಅಗತ್ಯವಿರುವಷ್ಟು ರೈಲುಗಳ ಲಭ್ಯತೆ, ಸಮಯ ಪಾಲನೆ ಹಾಗೂ ಮೂಲಸೌಕರ್ಯ ಇನ್ನೂ ಸಮರ್ಪಕವಾಗಿಲ್ಲ ರೈಲುಗಳ ನಡುವೆ ಹೆಚ್ಚಿನ ಅಂತರವಿದ್ದು ವಿಜಯಪುರ ಕಡೆಗೆ ಬೆಳಗ್ಗೆ ಸುಮಾರು 8:20ಕ್ಕೆ ರೈಲು ತೆರಳಿದ ನಂತರ ಮಧ್ಯಾಹ್ನ 3:00 ಗಂಟೆಯವರೆಗೆ ಬೇರೊಂದು ರೈಲು ಇಲ್ಲದ ಕಾರಣ ಪ್ರಯಾಣಿಕರು ಸುಮಾರು 6½ ಗಂಟೆಗಳ ಕಾಲ ನಿರೀಕ್ಷಿಸಬೇಕಾದ ಪರಿಸ್ಥಿತಿ ಇದೆ.
ಬೆಳಗ್ಗೆ 9 ಗಂಟೆಗೆ ಬಳ್ಳಾರಿ ಕಡೆಗೆ ರೈಲು ಸಂಚರಿಸಿದ ನಂತರ ಮತ್ತೆ ಮಧ್ಯಾಹ್ನ 1 ಘಂಟೆಯಿಂದ 2ಗಂಟೆಯವರೆಗೆ ರೈಲು ಇರುವುದಿಲ್ಲ. ಅದೇ ರೀತಿ ಹುಬ್ಬಳ್ಳಿ ಕಡೆಗೆ ಮಧ್ಯಾಹ್ನ 12:20ಕ್ಕೆ ರೈಲು ತೆರಳಿದ ನಂತರ ಸಂಜೆ 4:30ರವರೆಗೆ ಮತ್ತೊಂದು ರೈಲು ಇಲ್ಲದೆ ಸುಮಾರು ನಾಲ್ಕು ಗಂಟೆಗಳ ಕಾಯುವಿಕೆ ಎದುರಾಗುತ್ತಿದೆ. ಬಳ್ಳಾರಿ ಕಡೆಗೂ ವಾರದ ಕೆಲವು ದಿನಗಳಲ್ಲಿ ರೈಲುಗಳ ನಡುವೆ ನಾಲ್ಕರಿಂದ ಐದು ಗಂಟೆಗಳ ಅಂತರ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ .
ಕೆಲವು ರೈಲುಗಳು ತಡವಾಗಿ ಆಗಮಿಸುವುದು ಹಾಗೂ ತಡವಾಗಿ ಹೊರಡುವುದರಿಂದಲೂ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲುಗಳ ವೇಳಾಪಟ್ಟಿಯನ್ನು ಮರುಪರಿಶೀಲಿಸಿ, ಅಗತ್ಯವಿರುವ ಹೆಚ್ಚುವರಿ ರೈಲುಗಳನ್ನು ಗದಗ ಮೂಲಕ ಸಂಚರಿಸುವಂತಾಗಬೇಕು.
ಅದರಂತೆ ಗದಗ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಪ್ಲಾಟ್‌ಫಾರ್ಮ್ ಅಗತ್ಯವಿರುತ್ತದೆ ಗದಗ ಜಂಕ್ಷನ್‌ನಲ್ಲಿ ಪ್ರಸ್ತುತ ಮೂರು ಪ್ಲಾಟ್‌ಫಾರ್ಮ್‌ಗಳು ಮಾತ್ರ ಇರುವುದರಿಂದ ಕೆಲವು ಸಂದರ್ಭಗಳಲ್ಲಿ ರೈಲುಗಳನ್ನು ಹೊರಗಡೆ ನಿಲ್ಲಿಸುವ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ರೈಲು ಸಂಚಾರದ ಸುಗಮ ನಿರ್ವಹಣೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು
ಹಾಗೂ ಹೆಚ್ಚುವರಿ ಟಿಕೆಟ್ ಮತ್ತು ರಿಸರ್ವೇಶನ್ ಕೌಂಟರ್ ಅಗತ್ಯವಿದೆ.ಒಂದೇ ರಿಸರ್ವೇಶನ್ ಕೌಂಟರ್ ಇರುವುದರಿಂದ ತತ್ಕಾಲ್ ಟಿಕೆಟ್ ಪಡೆಯುವ ಸಮಯದಲ್ಲಿ ಸಾಮಾನ್ಯ ಟಿಕೆಟ್ ಪಡೆಯುವ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಟಿಕೆಟ್ ಹಾಗೂ ರಿಸರ್ವೇಶನ್ ಕೌಂಟರ್‌ಗಳನ್ನು ಆರಂಭಿಸಬೇಕಾಗಿದೆ .
ಪದೇ ಪದೇ ಇಂಜಿನ್ ಬದಲಾವಣೆಯಿಂದಾಗುವ ವಿಳಂಬಕ್ಕೆ ಕಡಿವಾಣದ ಅಗತ್ಯವಿದೆ. ಗದಗ ಜಂಕ್ಷನ್‌ನಲ್ಲಿ ಕೆಲವು ರೈಲುಗಳ ಇಂಜಿನ್ ಬದಲಾವಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದರಿಂದ ರೈಲುಗಳ ಸಂಚಾರದಲ್ಲಿ ವಿಳಂಬವಾಗುತ್ತಿದೆ.
ಅಗತ್ಯವಿರುವ ತಾಂತ್ರಿಕ ವ್ಯವಸ್ಥೆ ಕಲ್ಪಿಸಿ, ಇಂಜಿನ್ ಬದಲಾವಣೆಗೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಮೂಲಕ ರೈಲುಗಳ ಸಮಯ ಪಾಲನೆಯನ್ನು ಸುಧಾರಿಸಬೇಕು.
ಆದುದರಿಂದ ಈ ಭಾಗದ ಸಂಸದರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಗಮನಹರಿಸಬೇಕಾಗಿದೆ. ಗದಗ ಜಂಕ್ಷನ್‌ನ ರೈಲು ಸಮಸ್ಯೆ ಕೇವಲ ಒಂದು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಇದು ಗದಗ ಜಿಲ್ಲೆಯ ವಿವಿಧ ಭಾಗಗಳ ಜನರು ಹಾಗೂ ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ಸಾವಿರಾರು ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.
ಆದ್ದರಿಂದ ಗದಗ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎಚ್.ಕೆ. ಪಾಟೀಲ್ ಸೇರಿದಂತೆ ಗದಗ ಜಿಲ್ಲೆಯ ಎಲ್ಲಾ ಶಾಸಕರು ಈ ವಿಷಯದ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು ಎಂದು ಭಾರತೀಯ ಸೇವಾ ಸಮಿತಿಯ ಉತ್ತರ ಕರ್ನಾಟಕ ಅಧ್ಯಕ್ಷರಾದ PR. ಫ್ರಾನ್ಸಿಸ್ ಕಣ್ಣಯ್ಯ ಅವರು ಸಾರ್ವಜನಿಕರ ಪರವಾಗಿ ವಿನಂತಿಸಿದ್ದಾರೆ.
ಮಾನ್ಯ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ರೈಲು ಪ್ರಯಾಣಿಕರ ಸಮಸ್ಯೆಗಳನ್ನು ಗಮನಿಸಿ, ಸಂಸದರು ಹಾಗೂ ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಗದಗ ಜಂಕ್ಷನ್‌ಗೆ ಹೆಚ್ಚುವರಿ ರೈಲುಗಳು, ಉತ್ತಮ ಸಮಯ ಪಾಲನೆ, ಹೆಚ್ಚುವರಿ ಪ್ಲಾಟ್‌ಫಾರ್ಮ್, ಹೆಚ್ಚುವರಿ ಟಿಕೆಟ್/ರಿಸರ್ವೇಶನ್ ಕೌಂಟರ್ ಹಾಗೂ ಅಗತ್ಯ ರೈಲ್ವೆ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕುಸಮಸ್ತ ನಾಗರಿಕರ ಹಿತದೃಷ್ಟಿಯಿಂದ ಫಾಸ್ಟರ್ ಫ್ರಾನ್ಸಿಸ್ ಕನಯ್ಯಾ ರವರು ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.
ವರದಿ ಫಾಸ್ಟರ್ ಫ್ರಾನ್ಸಿಸ್ ಕನ್ಹಯ್ಯ ಗದಗ