ಕರುನಾಡು ಘರ್ಜನೆ ಸುದ್ದಿ ಗದಗ ಅಕ್ಟೋಬರ್ 22: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯನ್ನು ಜಿಲ್ಲೆಯಲ್ಲಿ ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಗದಗ ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ
ಜಿಲ್ಲೆಯಾದ್ಯಂತ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಕ್ಟೋಬರ್ 23ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 27ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಅಕ್ಟೋಬರ್ 31ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
*ಜಿಲ್ಲೆಯಲ್ಲಿ 27 ಮತಗಟ್ಟೆಗಳ ಸ್ಥಾಪನೆ:* ಗದಗ ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು 27 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ತಾಲೂಕುವಾರು ಮತಗಟ್ಟೆಗಳ ವಿವರ ಹೀಗಿದೆ: ಗದಗ 14, ರೋಣ 3, ಮುಂಡರಗಿ 2, ನರಗುಂದ 2, ಗಜೇಂದ್ರಗಡ 2, ಶಿರಹಟ್ಟಿ 2 ಹಾಗೂ ಲಕ್ಷ್ಮೇಶ್ವರ 2.
ಜಿಲ್ಲೆಯಲ್ಲಿ 13,756 ಪುರುಷರು ಹಾಗೂ 7,838 ಮಹಿಳೆಯರು ಸೇರಿದಂತೆ ಒಟ್ಟು 21,594 ಪದವೀಧರ ಮತದಾರರಿದ್ದಾರೆ. ತಾಲೂಕುವಾರು ಮತದಾರರ ವಿವರ ಹೀಗಿದೆ: ಗದಗ 10,250, ಮುಂಡರಗಿ 1,643, ನರಗುಂದ 1,734, ರೋಣ 2,528, ಗಜೇಂದ್ರಗಡ 2,408, ಶಿರಹಟ್ಟಿ 1,493 ಹಾಗೂ ಲಕ್ಷ್ಮೇಶ್ವರ 1,538.
*ಮತದಾನಕ್ಕೆ ಗುರುತಿನ ದಾಖಲೆ ಕಡ್ಡಾಯ:* ಮತದಾರರು ಮತದಾನ ದಿನದಂದು ಚುನಾವಣಾ ಆಯೋಗ ನಿಗದಿಪಡಿಸಿರುವ ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದು. ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಆದಾಯ ತೆರಿಗೆ ಗುರುತಿನ ಚೀಟಿ, ಭಾರತೀಯ ಪಾಸ್ಪೋರ್ಟ್, ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ಉದ್ದಿಮೆಗಳು ಹಾಗೂ ಖಾಸಗಿ ಔದ್ಯಮಿಕ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಸಂಬಂಧಿತ ಶಿಕ್ಷಣ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯ ನೀಡಿರುವ ಮೂಲ ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಅಂಗವೈಕಲ್ಯ ಪ್ರಮಾಣಪತ್ರ ಹಾಗೂ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ (ಯುಡಿಐಡಿ) ಇವುಗಳಲ್ಲಿ ಯಾವುದಾದರೂ ಒಂದನ್ನು ಬಳಸಬಹುದು.
ಮತಗಟ್ಟೆಯೊಳಗೆ ಹರಿತವಾದ ವಸ್ತುಗಳು, ಮೊಬೈಲ್ ಫೋನ್, ಕ್ಯಾಮೆರಾ, ಪೆನ್ನು, ಬೆಂಕಿಪೊಟ್ಟಣ, ಲೈಟರ್ ಹಾಗೂ ನೀರಿನ ಬಾಟಲಿಯಂತಹ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
*128 ಮತಗಟ್ಟೆ ಸಿಬ್ಬಂದಿ ನಿಯೋಜನೆ:* ಚುನಾವಣಾ ಕಾರ್ಯಕ್ಕಾಗಿ 9 ಸೆಕ್ಟರ್ ಅಧಿಕಾರಿಗಳು, 27 ಮತಗಟ್ಟೆ ಮುಖ್ಯಾಧಿಕಾರಿಗಳು (ಪಿ.ಆರ್.ಒ.) ಸೇರಿದಂತೆ ಒಟ್ಟು 128 ಮತಗಟ್ಟೆ ಸಿಬ್ಬಂದಿ, 27 ಗ್ರೂಪ್-ಡಿ ಸಿಬ್ಬಂದಿ ಹಾಗೂ 27 ಮೈಕ್ರೋ ಅಬ್ಸರ್ವರ್ಗಳನ್ನು ನಿಯೋಜಿಸಲಾಗಿದೆ.
ಮತಗಟ್ಟೆ ಸಿಬ್ಬಂದಿಗೆ ಅಕ್ಟೋಬರ್ 14 ಮತ್ತು 17ರಂದು ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಮೈಕ್ರೋ ಅಬ್ಸರ್ವರ್ಗಳಿಗೆ ಅಕ್ಟೋಬರ್ 14 ಮತ್ತು 15ರಂದು ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ.
ಜಿಲ್ಲೆಯ 27 ಮತಗಟ್ಟೆಗಳ ಪೈಕಿ 3 ಮತಗಟ್ಟೆಗಳನ್ನು ಅತಿಸೂಕ್ಷ್ಮ, 10 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ 14 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿಯೂ ವೆಬ್ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
*ಶಾಂತಿ, ಸುವ್ಯವಸ್ಥೆಗಾಗಿ ಪೊಲೀಸ್ ಬಂದೋಬಸ್ತ್ :* ಚುನಾವಣೆಯ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಉದ್ದೇಶಕ್ಕಾಗಿ 2 ಡಿವೈಎಸ್ಪಿ, 10 ಸಿಪಿಐ, 14 ಪಿಎಸ್ಐ, 32 ಎಎಸ್ಐ, 56 ಹೆಡ್ ಕಾನ್ಸ್ಟೆಬಲ್, 119 ಪೊಲೀಸ್ ಕಾನ್ಸ್ಟೆಬಲ್ ಹಾಗೂ 59 ಹೋಮ್ಗಾರ್ಡ್ ಸಿಬ್ಬಂದಿ ಸೇರಿದಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
*ಮತಪೆಟ್ಟಿಗೆಗಳ ಸಾಗಣೆಗೆ ವಿಶೇಷ ವ್ಯವಸ್ಥೆ:* ಅಕ್ಟೋಬರ್ 23ರಂದು ಮತದಾನ ಮುಕ್ತಾಯಗೊಂಡ ಬಳಿಕ ಏಳು ತಾಲೂಕುಗಳ 27 ಮತಗಟ್ಟೆಗಳಿಂದ ಮತಪೆಟ್ಟಿಗೆಗಳನ್ನು ಆಯಾ ತಾಲೂಕುಗಳಲ್ಲಿ ಸ್ಥಾಪಿಸಿರುವ ಡಿ-ಮಸ್ಟರಿಂಗ್ ಕೇಂದ್ರಗಳಿಗೆ ಸಾಗಿಸಲಾಗುತ್ತದೆ.
ಗದಗ ತಾಲೂಕಿಗೆ ಸಂಬಂಧಿಸಿದ ಮತಪೆಟ್ಟಿಗೆಗಳನ್ನು ಗದಗ-ಬೆಟಗೇರಿಯ ನಗರಸಭೆ ಸಂಯುಕ್ತ ಪದವಿ ಪೂರ್ವ ವಿದ್ಯಾಲಯಕ್ಕೆ, ಲಕ್ಷ್ಮೇಶ್ವರ ತಾಲೂಕಿಗೆ ಸಂಬಂಧಿಸಿದವುಗಳನ್ನು ಪುರಸಭೆ ಕಾರ್ಯಾಲಯಕ್ಕೆ, ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡ ಹಾಗೂ ನರಗುಂದ ತಾಲೂಕುಗಳ ಮತಪೆಟ್ಟಿಗೆಗಳನ್ನು ಆಯಾ ತಾಲೂಕುಗಳ ತಹಶೀಲ್ದಾರ್ ಕಚೇರಿಗಳಲ್ಲಿ ಸ್ಥಾಪಿಸಿರುವ ಡಿ-ಮಸ್ಟರಿಂಗ್ ಕೇಂದ್ರಗಳಿಗೆ ತಲುಪಿಸಲಾಗುತ್ತದೆ.
ನಂತರ ಮತಪಟ್ಟಿಗಳು ಹಾಗೂ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಲಕೋಟೆಗಳನ್ನು ಪೊಲೀಸ್ ಎಸ್ಕಾರ್ಟ್ನೊಂದಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.
ಇದಕ್ಕಾಗಿ ಎರಡು ಮಾರ್ಗಗಳನ್ನು ನಿಗದಿಪಡಿಸಲಾಗಿದೆ. ಮೊದಲ ಮಾರ್ಗದಲ್ಲಿ ರೋಣ, ಗಜೇಂದ್ರಗಡ ಹಾಗೂ ನರಗುಂದ ತಾಲೂಕುಗಳ ಮತಪೆಟ್ಟಿಗೆಗಳನ್ನು ಗದಗ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಧಾರವಾಡಕ್ಕೆ ಸಾಗಿಸಲಾಗುತ್ತದೆ. ಎರಡನೇ ಮಾರ್ಗದಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ಹಾಗೂ ಗದಗ ತಾಲೂಕುಗಳ ಮತಪೆಟ್ಟಿಗೆಗಳನ್ನು ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗದಗ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಧಾರವಾಡಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 27ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಹಾಗೂ ಸುಗಮವಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.