ಕರುನಾಡು ಘರ್ಜನೆ ಸುದ್ದಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಚಂದ್ರಮ್ ಯೋಗಪ್ಪ ಗೊಳ್ ಕುಟುಂಬ ಹೊಸ ವೋಲ್ವೋ ಕಾರಿನಲ್ಲಿ ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟಿದ್ದರು. ನೆಲಮಂಗಲದ ಬಳಿ ವೇಗವಾಗಿ ಬಂದ ಕಂಟೇನರ್ ಕಾರಿನ ಮೇಲಿ ಅಪ್ಪಳಿಸಿದ್ದು ಈ ಘೋರ ದುರಂತ ನಡೆದಿದೆ.ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಸರಣಿ ಅಪಘಾತ ನಡೆದಿದೆ. ಈಚರ್ ಕ್ಯಾಂಟರ್ ಗಾಡಿ ಬೆಂಗಳೂರು ಕಡೆಯಿಂದ ತುಮಕೂರಿಗೆ ಹೋಗುತ್ತಾ ಇತ್ತು. ಕ್ಯಾಂಟರ್ನ ಹಿಂದೆ ವೋಲ್ವೋ ಕಾರು ಬರುತ್ತಾ ಇತ್ತು. ಪಕ್ಕದ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಕಂಟೇನರ್ ಲಾರಿಯೊಂದು ವೇಗವಾಗಿ ಹೋಗುತ್ತಾ ಇತ್ತು.
ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೇನರ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಮೀಡಿಯನ್ ಹತ್ತಿಸಿದ್ದಾನೆ. ಎದುರುಗಡೆಯ ರಸ್ತೆಗೆ ಇಳಿದ ಕಂಟೇನರ್ ತುಮಕೂರು ಕಡೆ ಹೋಗುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್ಗೆ ಡಿಕ್ಕಿಯಾದ ಬಳಿಕ ಕಂಟೇನರ್ ಹಿಂದೆಯಿದ್ದ ವೋಲ್ವೋ ಕಾರಿನ ಮೇಲೆ ಬಿದ್ದಿದೆ.ಕಂಟೇನರ್ ಬಿದ್ದ ಪರಿಣಾಮ ವೋಲ್ವೋ ಕಾರು ಪೂರ್ತಿ ಜಖಂಗೊಂಡಿದೆ. ಆಗ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಹಾಗೂ ಕ್ಯಾಂಟರ್ ಚಾಲಕರಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.