ಕರುನಾಡು ಘರ್ಜನೆ ಸುದ್ದಿ : ಗದಗ. ಫೆ.15: ಗದಗಿನ ನಾಗಾವಿಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಆವರಣದಲ್ಲಿನ ಸಬರಮತಿ ಆಶ್ರಮ ಹಾಗೂ ಸ್ವಾಮಿ ವಿವೇಕಾನಂದ ಪುತ್ಥಳಿಯನ್ನು ಶನಿವಾರ ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲ ಅವರು ವೀಕ್ಷಿಸಿ ಮೆಚ್ಚುಗೆ, ಪ್ರಶಂಸೆ ವ್ಯಕ್ತಪಡಿಸಿದರು.
ಮೊದಲು ವಿವಿ ಆವರಣದ ಸಬರಮತಿ ಆಶ್ರಮಕ್ಕೆ ಬೇಟಿ ನೀಡಿ, ಗುಜರಾತ್ ರಾಜ್ಯದಲ್ಲಿರುವ ಗಾಂಧಿಜಿಯವರ ಸಬರಮತಿ ಆಶ್ರಮದ ಮಾದರಿಯಲ್ಲಿಯೇ ನಿರ್ಮಿಸಿರುವ ಸಬರಮತಿ ಆಶ್ರಮವನ್ನು ಸಂಪೂರ್ಣವಾಗಿ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಗಾಂಧಿಜಿಯವರ ತತ್ವ ಸಿದ್ದಾಂತ, ಆಚಾರ ವಿಚಾರಗಳನ್ನು ಇಲ್ಲಿ ಆಗಮಿಸುವ ಪ್ರವಾಸಿಗಳಿಗೆ ಉಣಬಡಿಸುವ ಉದ್ದೇಶ ಈ ಆಶ್ರಮದಿಂದ ಆಗಲಿ ಎಂದು ಹೇಳಿದರು.
ನಂತರ ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲ ಅವರು ವಿವಿ ಆವರಣದಲ್ಲಿ ನೂತನವಾಗಿ ಲೋಕಾರ್ಪಣೆಯಾದ ಸ್ವಾಮಿ ವಿವೇಕಾನಂದರ ಪುತ್ಥಳಿ ವೀಕ್ಷಣೆ ನಡೆಸಿ ಪ್ರಶಂಸೆ ವ್ಯಕ್ತಪಡಿಸಿದರು. ಸ್ವಾಮಿ ವಿವೇಕಾನಂದರು ಮಹಾನ್ ಮೇಧಾವಿಗಳು ಅವರ ವಿಚಾರಧಾರೆ ದೃಢ ನಿರ್ಧಾರಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸುರೇಶ್ ನಾಡಗೌಡರ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಲೋಕಾಯುಕ್ತ ಎಸ್.ಪಿ ಹನುಮಂತರಾಯ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.