ಕರುನಾಡು ಘರ್ಜನೆ ಸುದ್ದಿ : ಗದಗ: ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿಯ ಗವಿಮಠದ ಸ್ವಾಮೀಜಿಗಾಗಿ ಎರಡು ಸಮಾಜದ ನಡುವೆ ವೈಮನಸ್ಸು ಉಂಟಾಗಿದೆ. ಅಕ್ರಮವನ್ನು ಬಯಲು ಮಾಡಿದ್ದಕ್ಕೆ ತಮ್ಮನ್ನು ಮಠದಿಂದ ಹೊರಹಾಕಲಾಗಿದೆ ಎಂದು ಸ್ವಾಮೀಜಿ ಆರೋಪಿಸಿದ್ದು, ಇದರಿಂದ ಭಕ್ತರು ಮತ್ತು ಭೋವಿ ಸಮಾಜದ ನಡುವೆ ವೈಮನಸ್ಸು ಹೆಚ್ಚಾಗಿದೆ.

ತಾಲೂಕಿನ ಆದರಹಳ್ಳಿ ಗ್ರಾಮದ ಐತಿಹಾಸಿಕ ಗವಿಮಠಕ್ಕೆ ಕುಮಾರ್ ಮಹಾರಾಜ ಸ್ವಾಮೀಜಿಯವರನ್ನು ನೇಮಕ ಮಾಡಲಾಗಿದೆ. ಆದರೆ ಸ್ವಾಮೀಜಿಯವರನ್ನು ಮಠದಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ. ಗವಿಮಠದ ಸುತ್ತಲೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಭೋವಿ ಸಮಾಜದವರ ವಿರುದ್ಧ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿ ಅರೆಸ್ಟ್ ಮಾಡಿಸಿದ್ದರು. ಇದರಿಂದಾಗಿ ಸ್ವಾಮೀಜಿಯನ್ನು ಮಠದಿಂದ ಹೊರಹಾಕಲಾಗಿದೆ ಎನ್ನಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ವಾಮೀಜಿ, ಅವರ ಅಕ್ರಮ ಬಯಲು ಮಾಡಿದಕ್ಕೆ ನನ್ನನ್ನು ಮಠದಿಂದ ಹೊರಕ್ಕೆ ಕಳಿಸಿದ್ದಾರೆ. ಇದರಲ್ಲಿ ಸ್ಥಳೀಯ ರಾಜಕೀಯ ನಾಯಕನ ಕೈವಾಡವೂ ಇದೆ. ನಮ್ಮನ್ನು ಮಠದಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ನಮಗೆ ನ್ಯಾಯ ಸಿಗುವವರಿಗೂ ನಾನು ಸೇವಾಲಾಲ್ ಮಂದಿರದಲ್ಲಿ ಧರಣಿ ಮಾಡುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಇತ್ತ ನಮ್ಮ ಸ್ವಾಮೀಜಿಯನ್ನು ಮಠದಿಂದ ಹೊರಕ್ಕೆ ಹಾಕಿ, ಕೊಠಡಿಗೆ ಬೀಗ ಹಾಕಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಪರ ಹಾಗೂ ವಿರೋಧ ಪ್ರತಿಭಟನೆಗಳು ನಡೆಯುತ್ತಿದ್ದು, ಎರಡು ಸಮಾಜದ ನಡುವೆ ವೈಮನಸ್ಸು ಉಂಟಾಗಿದೆ.