ಕರುನಾಡು ಘರ್ಜನೆ ಸುದ್ದಿ : ಇಂದು ಬೆಂಗಳೂರಿನ ವೆಲ್ಫೇರ್ ಭವನದಲ್ಲಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ವತಿಯಿಂದ ಉತ್ಸಾಹದಿಂದ ಸ್ವಾತಂತ್ರ್ಯ ದಿನ ಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವು ರಾಜ್ಯ ಅಧ್ಯಕ್ಷ ಅಡ್ವೊಕೇಟ್ ತಾಹೇರ ಹುಸೇನ್ ಅವರಿಂದ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು, ರಾಜ್ಯ ಉಪಾಧ್ಯಕ್ಷ ಇಂಜಿನಿಯರ್ ಹಬೀಬುಲ್ಲಾ ಖಾನ್ ಅವರ ಪ್ರಾಸ್ತಾವಿಕ ನುಡಿಗಳಿಂದ ಮುಂದುವರಿಯಿತು. ಅವರು ದೇಶಕ್ಕಾಗಿ ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ವೆಲ್ಫೇರ್ ಪಾರ್ಟಿಯ ಉದ್ದೇಶವೇ ದೇಶಕ್ಕೆ ಇಂತಹ ತ್ಯಾಗಶೀಲ ಮತ್ತು ಸತ್ಯನಿಷ್ಠ ನಾಯಕರನ್ನು ರೂಪಿಸುವುದಾಗಿದೆ ಎಂದು ಹೇಳಿದರು.
ನಂತರ ಅತಿಥಿಗಳಾದ ರಾಜ್ಯ ಕಾರ್ಯಕಾರಿ ಸದಸ್ಯ ಶ್ರೀ ಪ್ರಭಾಕರ್, ರಾಜ್ಯ ಕಾರ್ಯದರ್ಶಿ ಶ್ರೀಮತಿ ತಲತ್ ಯಾಸ್ಮೀನ್ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯ ಶ್ರೀ ಅಬುಲ್ ಸಲಾಂ ಅವರು ಸ್ವಾತಂತ್ರ್ಯದ ಅರ್ಥ, ಅದರ ಸಂರಕ್ಷಣೆ ಮತ್ತು ಪ್ರಸ್ತುತ ಪರಿಸ್ಥಿತಿಯ ಸವಾಲುಗಳ ಬಗ್ಗೆ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯ ಅಧ್ಯಕ್ಷ ಅಡ್ವೊಕೇಟ್ ತಾಹೇರ ಹುಸೇನ್ ಅವರು, ಭಾರತದ ಸ್ವಾತಂತ್ರ್ಯ ಒಂದು ಸಂಘಟಿತ ರಾಜಕೀಯ ಹೋರಾಟ ಮತ್ತು ಜನಶಕ್ತಿಯಿಂದ ಸಾಧ್ಯವಾಯಿತು ಎಂಬುದನ್ನು ನೆನಪಿಸಿದರು. ಇಂದಿನ ದಿನಗಳಲ್ಲಿ ಸಾಮಾನ್ಯ ಜನರು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಅನ್ಯಾಯ, ಅಸಮಾನತೆ ಮತ್ತು ಸಮಸ್ಯೆಗಳನ್ನು ನಿವಾರಿಸಲು ಸಹ ಒಂದು ಬಲವಾದ ರಾಜಕೀಯ ಚಳುವಳಿ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆ ಕು. ರಿಜ್ವಾನ್ ಹುಮನಾಬಾದ್ ವಹಿಸಿಕೊಂಡಿದ್ದು, ಧನ್ಯವಾದ ಸಮರ್ಪಣೆ ಶ್ರೀ ಇಮ್ತಿಯಾಜ್ ಅವರಿಂದ ನಡೆಯಿತು.