ಕರುನಾಡು ಘರ್ಜನೆ ಸುದ್ದಿ ಗದಗ: ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗಿ 2 ತಿಂಗಳಾದರೂ, ಅತಿಥಿ ಉಪನ್ಯಾಸಕರಿಲ್ಲದೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ತರಗತಿಗಳನ್ನೇ ನಡೆಸದೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಕೂಡ ಘೋಷಿಸಿವೆ. ಇನ್ನೊಂದೆಡೆ, ಖಾಸಗಿ ಕಾಲೇಜುಗಳಲ್ಲಿ ಸರಾಗವಾಗಿ ಪಾಠಗಳು ನಡೆದು ಅಲ್ಲಿನ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ರಾಜ್ಯದ ಬಡ ವಿದ್ಯಾರ್ಥಿಗಳಿಗಾದ ಈ ಘೋರ ಅನ್ಯಾಯವನ್ನು ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ರಾಜ್ಯದ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಹೋರಾಟ ನಡೆಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಸೆಪ್ಟೆಂಬರ್ 27ರಂದು ರಾಜ್ಯವಾಪಿ ಸ್ವಯಂಪ್ರೇರಿತರಾಗಿ ತರಗತಿ ಬಹಿಷ್ಕರಿಸಿದ್ದಾರೆ. ಈಶ್ವರ ಚಂದ್ರ ವಿದ್ಯಾಸಾಗರ್, ಜ್ಯೋತಿರಾವ್ ಪುಲೆ, ಕ್ರಾಂತಿಕಾರಿ ಭಗತ್ ಸಿಂಗ್, ನೇತಾಜಿಯವರ ಆದರ್ಶಗಳಿಂದ ಪ್ರೇರಿತರಾಗಿ ತಮ್ಮ ಶಿಕ್ಷಣದ ಹಕ್ಕನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕಿಂದು ಜಯ ದೊರೆತಿದೆ. ಅಂತಿಮವಾಗಿ, ಕರ್ನಾಟಕ ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರ ನೇಮಕಾತಿಗೆ ಮುಂದಾಗಿದೆ!! ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸಿದ ಸರ್ಕಾರದ ನಡೆಯನ್ನು ಎಐಡಿಎಸ್ಓ ಸ್ವಾಗತಿಸುತ್ತದೆ. ಆದರೆ, ಪ್ರತಿ ವಿಷಯಕ್ಕೆ ಕನಿಷ್ಠ 30 ಗಂಟೆ ಪಾಠ ನಡೆಸಿದ ನಂತರವಷ್ಟೇ ಪರೀಕ್ಷೆಗಳನ್ನು ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ.
ಹೋರಾಟದಿಂದ ಮಾತ್ರವೇ ಬದಲಾವಣೆ ಸಾಧ್ಯ ಎಂಬ ಸಂದೇಶವನ್ನು ಕರ್ನಾಟಕದ ವಿದ್ಯಾರ್ಥಿಗಳು ಈ ಮೂಲಕ ಎಲ್ಲೆಡೆ ಸಾರಿದ್ದಾರೆ. ಹೋರಾಟದ ಭಾಗವಾದ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಇಂದ ಕ್ರಾಂತಿಕಾರಿ ಅಭಿನಂದನೆಗಳು. ಬೆಂಬಲವಾಗಿ ನಿಂತ ಎಲ್ಲ ಶಿಕ್ಷಣ ಪ್ರೇಮಿ ಜನತೆಗೆ ವಂದನೆಗಳು.