ಕರುನಾಡು ಘರ್ಜುನೆ ಸುದ್ದಿ ಬೆಂಗಳೂರು:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆ ಗೃಹ ಸಚಿವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (ಡಬ್ಲ್ಯುಪಿಐ) ರಾಜ್ಯ ಅಧ್ಯಕ್ಷರಾದ ಅಡ್ವೋಕೇಟ್ ತಾಹೇರ್ ಹುಸೇನ್ ಅವರು ಆಗ್ರಹಿಸಿದ್ದಾರೆ.
ಪುನೀತ್ ಕೆರೇಹಳ್ಳಿ ಎಂಬ ಕೊಲೆ ಆರೋಪಿ ಮತ್ತು ಗೂಂಡಾ ವ್ಯಕ್ತಿ ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳಿಂದ ಬಂದಿರುವ ಅಮಾಯಕ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಅವರನ್ನು ಬಾಂಗ್ಲಾದೇಶಿ ವಲಸಿಗರು ಎಂದು ಗುರುತಿಸಿ ಕಿರುಕುಳ ನೀಡಲಾಗುತ್ತಿದೆ. ಕೆಲವೆಡೆ ಮಾರಣಾಂತಿಕ ಹಲ್ಲೆಗಳು ನಡೆದಿದ್ದು, ಈ ಬಗ್ಗೆ ಸರ್ಕಾರ ಸಂಪೂರ್ಣ ಮೌನ ವಹಿಸಿರುವುದು ಆತಂಕಕಾರಿಯಾಗಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಪುನೀತ್ ಕೆರೇಹಳ್ಳಿ ಎಂಬ ಅಪರಾಧಿ ಬಡ ಕಾರ್ಮಿಕರ ಗುಡಿಸಲುಗಳಿಗೆ ನುಗ್ಗಿ, ಅವರನ್ನು ಬಾಂಗ್ಲಾದೇಶಿಯರು ಎಂದು ಆರೋಪಿಸಿ ಮನೆ ಬಿಡುವಂತೆ ಬೆದರಿಕೆ ಹಾಕಿರುವ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿವೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಸಹ, ಪೊಲೀಸ್ ಇಲಾಖೆ ಆತನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದೇ ಕಾನೂನು ವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ಬಾಂಗ್ಲಾದೇಶಿ ವಲಸಿಗರ ಪತ್ತೆಹಚ್ಚುವ ಹೊಣೆ ಯಾರದು? ವಾಸ್ತವವಾಗಿ ಅಕ್ರಮ ವಲಸಿಗರು ರಾಜ್ಯಕ್ಕೆ ನುಸುಳಿದ್ದರೆ ಅದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
ಇದೇ ರೀತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರ್ಖಂಡ್ ಮೂಲದ ಒಬ್ಬ ಕಾರ್ಮಿಕನ ಮೇಲೆ “ಬಾಂಗ್ಲಾದೇಶಿ” ಎಂಬ ಆರೋಪ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾನೂನನ್ನು ಕೈಗೆತ್ತಿಕೊಂಡು ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಗೂಂಡಾ ಹಾಗೂ ಕೋಮುವಾದಿ ಗುಂಪುಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದ ಸಾಮಾಜಿಕ ಶಾಂತಿ ಸಂಪೂರ್ಣವಾಗಿ ಭಂಗವಾಗಲಿದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಡ್ರಗ್ ಮಾಫಿಯಾ ಅಟ್ಟಹಾಸ ಮೆರೆಯುತ್ತಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾದಕವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸುತ್ತಿರುವುದು ನಮ್ಮ ಬೇಹುಗಾರಿಕಾ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ನಮ್ಮ ರಾಜ್ಯದ ಗುಪ್ತಚರ ದಳ ನಿದ್ರಿಸುತ್ತಿದೆಯೇ? ಇದು ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ಈ ದಂಧೆಗೆ ಆಸರೆಯಾಗಿರುವುದರ ಸಂಕೇತವೆಂದು ಅವರು ಗಂಭೀರ ಆರೋಪ ಮಾಡಿದರು.