ಕರುನಾಡ ಘರ್ಜನೆ ಸುದ್ದಿ ಗದಗ : ಗುತ್ತಿಗೆದಾರರಿಂದ ಕಮಿಷನ್ ರೂಪದಲ್ಲಿ ₹5 ಲಕ್ಷ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಆಸ್ಪತ್ರೆ ಶಾಸಕ ಡಾ. ಚಂದ್ರು ಲಮಾಣಿ ಅವರದೇ ಸ್ವತ್ತಾಗಿದ್ದು, ಅವರು ಸ್ವತಃ ವೈದ್ಯರೂ ಆಗಿದ್ದಾರೆ.
ದಾಳಿಯ ವೇಳೆ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಮತ್ತು ಗುರು ಕೂಡ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಸದ್ಯ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕಾಮಗಾರಿ ಸಂಬಂಧಿತ ಯೋಚನೆಗಾಗಿ ಗುತ್ತಿಗೆದಾರನಿಂದ ಒಟ್ಟು ₹11 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಅದರ ಭಾಗವಾಗಿ ಮುಂಗಡ ₹5 ಲಕ್ಷ ಕಮಿಷನ್ ಸ್ವೀಕರಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.