ಕರುನಾಡು ಘರ್ಜನೆ ಸುದ್ದಿ ಗದಗ 20: “ನಗರದ 16ನೇ ವಾರ್ಡ್ ವ್ಯಾಪ್ತಿಯ ಹೊಂಬಳನಾಕಾ ಜನತಾ ಕಾಲೋನಿಯ ನಿವಾಸಿಗಳು ನಾಗರಿಕ ಸಮಾಜದಲ್ಲಿದ್ದೇವೋ ಅಥವಾ ಕಾಡಿನಲ್ಲಿದ್ದೇವೋ ಎಂಬ ಅನುಮಾನ ಕಾಡುತ್ತಿದೆ. 21ನೇ ಶತಮಾನದಲ್ಲೂ ಒಂದು ತುರ್ತು ಆಂಬ್ಯುಲೆನ್ಸ್ ಬರಲು ದಾರಿಯಿಲ್ಲದ ಸ್ಥಿತಿಯಲ್ಲಿ ಬದುಕುತ್ತಿರುವುದು ಈ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ,” ಎಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಲೋನಿಯ ಜ್ವಲಂತ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ:
*1. ಮೃತ್ಯುಕೂಪವಾಗಿರುವ 30 ವರ್ಷಗಳ ಹಳೆಯ ಸಿಡಿ:*
ಕಾಲೋನಿಗೆ ಸಂಪರ್ಕ ಕಲ್ಪಿಸುವ ಏಕೈಕ ಕಿರುಸೇತುವೆ (ಸಿಡಿ) ಸಂಪೂರ್ಣ ಶಿಥಿಲಗೊಂಡಿದೆ. ಕಾಂಕ್ರೀಟ್ ಕಿತ್ತುಹೋಗಿ, ಒಳಗಿನ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಕೊಳೆತು ಹೋಗಿವೆ. ನಿತ್ಯವೂ ನೂರಾರು ಶಾಲಾ ಮಕ್ಕಳು, ವೃದ್ಧರು ಇದೇ ಭಯಾನಕ ಸೇತುವೆಯ ಮೇಲೆ ಓಡಾಡುತ್ತಿದ್ದಾರೆ. ಒಂದು ವೇಳೆ ಈ ಸೇತುವೆ ಕುಸಿದು ಪ್ರಾಣಹಾನಿಯಾದರೆ ಅದಕ್ಕೆ ನಗರಸಭೆ ಮತ್ತು ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ.
*2. ಅರ್ಧಕ್ಕೆ ನಿಂತ ಕಾಮಗಾರಿಗಳು – ಸಂಪರ್ಕವಿಲ್ಲದ ರಸ್ತೆಗಳು:*
“ಸಚಿವರ ಸುಪುತ್ರರಾದ ಶ್ರೀ ಕೃಷ್ಣಗೌಡ ಪಾಟೀಲರು ಕೇವಲ ಹೆಸರಿಗೆ ಸಚಿವರ ಪುತ್ರರಲ್ಲ, ಅವರು ಈ ಭಾಗದ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ನಗರದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸಂಚರಿಸಿ, ಬಡವರ ಕಷ್ಟಕ್ಕೆ ಸ್ಪಂದಿಸುವ ಅವರ ಗುಣ ನಿಜಕ್ಕೂ ಶ್ಲಾಘನೀಯ. ಅವರ ವಿಶೇಷ ಕಾಳಜಿಯಿಂದಲೇ ಇಂದು ನಮ್ಮ ಕಾಲೋನಿಗೆ 45 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ರಸ್ತೆ ಕಾಮಗಾರಿ ಆರಂಭವಾಗಿರುವುದು ಸ್ವಾಗತಾರ್ಹ. ಆದರೆ, ರಸ್ತೆಗಳು ಪರಸ್ಪರ ಸಂಪರ್ಕ ಹೊಂದಿಲ್ಲ. ಡಿಸಿ ಮಿಲ್ ಕಾಂಪೌಂಡ್‌ನಿಂದಾಗಿ ರಸ್ತೆ ಅರ್ಧಕ್ಕೆ ನಿಂತಿದೆ. ವಾಹನಗಳು ಒಳಗೆ ಹೋದರೆ ಮತ್ತೆ ರಿವರ್ಸ್ ಗೇರ್‌ನಲ್ಲೇ ಬರಬೇಕಾದ ಅನಿವಾರ್ಯತೆ ಇದೆ. ಈ ಕಾಂಪೌಂಡ್ ತೆರವುಗೊಳಿಸಿ ಹಳೇ ಕೋರ್ಟ್ ವೃತ್ತ ಹಾಗೂ ರೈಲ್ವೇ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಿದರೆ ಮಾತ್ರ ಈ ಭಾಗದ 40 ವರ್ಷಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
*3. ರಾಜಕಾಲುವೆಯ ಅವಾಂತರ:*
ಅರ್ಧಕ್ಕೆ ಸ್ಥಗಿತಗೊಂಡಿರುವ ರಾಜಕಾಲುವೆ ಕಾಮಗಾರಿಯಿಂದ ಮಳೆಗಾಲದಲ್ಲಿ ಕಾಲೋನಿಯ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ನಗರಸಭೆ ಅಧಿಕಾರಿಗಳಾದ ಲಕ್ಷ್ಮಣ ಜೋಗುದಂಡಕರ್ ಸಾಹೇಬರು ಬಡವರ ಪರ ಗಟ್ಟಿ ಮುತುವರ್ಜಿ ತೋರುತ್ತಿದ್ದಾರೆ ಮತ್ತು ನಗರಸಭೆಯ ಹಿರಿಯ ಸದಸ್ಯರಾದ ಕೃಷ್ಣಾ ಪರಾಪೂರ ಅವರು ಈ ಭಾಗದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ಪ್ರಯತ್ನಕ್ಕೆ ಪೂರಕವಾಗಿ ಸರ್ಕಾರ ದೊಡ್ಡ ಮಟ್ಟದ ಅನುದಾನ ಬಿಡುಗಡೆ ಮಾಡಬೇಕಿದೆ.
*ನಮ್ಮ ಸಂಘದ ಒತ್ತಾಯಗಳು:*
ಕಾಲೋನಿಯ ಸಮಗ್ರ ಅಭಿವೃದ್ಧಿಗಾಗಿ ಕೃಷ್ಣಗೌಡರು ತಮ್ಮ ತಂದೆಯವರಾದ ಸಚಿವರ ಮೂಲಕ *’ಬೃಹತ್ ಯೋಜನೆ’* ಯೊಂದನ್ನು ರೂಪಿಸಿ, ಕನಿಷ್ಠ 2 ರಿಂದ 3 ಕೋಟಿ ರೂಪಾಯಿಗಳ ವಿಶೇಷ ಅನುದಾನ ಮಂಜೂರು ಮಾಡಿಸಬೇಕು.
ಕೊಳೆತು ಹೋಗಿರುವ ಹಳೆಯ ಸಿಡಿಯನ್ನು ತೆರವುಗೊಳಿಸಿ, ಯುದ್ಧೋಪಾದಿಯಲ್ಲಿ ಸುಸಜ್ಜಿತ ಹೊಸ ಸೇತುವೆ ನಿರ್ಮಿಸಬೇಕು.
ಬಾಕಿ ಉಳಿದಿರುವ ಅರ್ಹ ಬಡ ಕುಟುಂಬಗಳಿಗೆ ಕೂಡಲೇ ಆಶ್ರಯ ಮನೆಗಳನ್ನು ಮಂಜೂರು ಮಾಡಬೇಕು.
“ನಾವು ಯಾರ ಮನೆಗೂ ನುಗ್ಗುತ್ತಿಲ್ಲ, ನಮಗೆ ಬೇಕಿರುವುದು ಕನಿಷ್ಠ ಮೂಲಭೂತ ಸೌಕರ್ಯ ಮತ್ತು ನೆಮ್ಮದಿಯ ಬದುಕು. ಈ ಮನವಿಯನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಬಡಾವಣೆಯ ಎಲ್ಲಾ ನಿವಾಸಿಗಳೊಂದಿಗೆ ಬೀದಿಗಿಳಿದು ಕ್ರಾಂತಿಕಾರಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ,” ಎಂದು ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಎಚ್ಚರಿಕೆ ನೀಡಿದ್ದಾರೆ
ಕೃಷ್ಣಾ ಎಚ್. ಹಡಪದ
9845650612