ಕರುನಾಡು ಘರ್ಜನೆ ಸುದ್ದಿ ಗದಗ 04: “ತಲತಲಾಂತರದಿಂದ ಸವಿತಾ ಸಮಾಜವು ನಂಬಿಕೊಂಡು ಬಂದಿರುವ ಪವಿತ್ರ ‘ಕ್ಷೌರಿಕ’ (‘ಬಾರ್‌ಬರ್’) ವೃತ್ತಿಯ ಹೆಸರನ್ನು ಅಸಂಘಟಿತ ಕಾರ್ಮಿಕ ಕಾರ್ಡ್‌ಗಳಲ್ಲಿ ಇತರೆ ವೃತ್ತಿ ನಿರತರಿಗೂ ಹಂಚುತ್ತಿರುವುದು ಸಮುದಾಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಈ ತಾಂತ್ರಿಕ ಲೋಪವನ್ನು ಕೂಡಲೇ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಕ್ರಾಂತಿಕಾರಿ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾರ್ಮಿಕ ಇಲಾಖೆಯ ನಿರ್ಲಕ್ಷ್ಯದಿಂದ ಸವಿತಾ ಸಮಾಜದ ಹಿತಾಸಕ್ತಿಗೆ ಆಗುತ್ತಿರುವ ಹೊಡೆತದ ಬಗ್ಗೆ ಸುದೀರ್ಘವಾಗಿ ವಿವರಿಸಿದ್ದಾರೆ.
*ವೃತ್ತಿ ಗೌರವದ ಪ್ರಶ್ನೆ*
“ಕ್ಷೌರಿಕ ವೃತ್ತಿಯು ಸವಿತಾ ಸಮಾಜದ ಅವಿಭಾಜ್ಯ ಅಂಗ. ಆದರೆ ಕಾರ್ಮಿಕ ಇಲಾಖೆಯು ಬ್ಯೂಟಿ ಪಾರ್ಲರ್ ನಡೆಸುವವರಿಗೂ ‘ಬಾರ್‌ಬರ್’ ಎಂದೇ ನಮೂದಿಸಿ ಗುರುತಿನ ಚೀಟಿ ನೀಡುತ್ತಿದೆ. ಬ್ಯೂಟಿ ಪಾರ್ಲರ್ ಮತ್ತು ಸವಿತಾ ಸಮಾಜದ ಪರಂಪರಾಗತ ಕ್ಷೌರಿಕ ವೃತ್ತಿಯ ನಡುವೆ ಸಾಂಸ್ಕೃತಿಕವಾಗಿ ಮತ್ತು ತಾಂತ್ರಿಕವಾಗಿ ಅಗಾಧ ವ್ಯತ್ಯಾಸವಿದೆ. ಎರಡನ್ನೂ ಒಂದೇ ವರ್ಗದಲ್ಲಿ ಸೇರಿಸಿರುವುದು ವೃತ್ತಿಪರ ನೈತಿಕತೆಗೆ ಎಸಗಿದ ಅಪಚಾರವಾಗಿದೆ,” ಎಂದು ಕೃಷ್ಣಾ ಎಚ್ ಹಡಪದ ಅವರು ಕಿಡಿಕಾರಿದ್ದಾರೆ.
*ಸೌಲಭ್ಯಗಳ ಲೂಟಿಗೆ ಆಸ್ಪದ*
“ಸರ್ಕಾರವು ಸವಿತಾ ಸಮಾಜದ ಅಭಿವೃದ್ಧಿಗಾಗಿ ನೀಡುವ ವಿಶೇಷ ಆರ್ಥಿಕ ನೆರವು, ಉಪಕರಣಗಳ ಸಹಾಯಧನ ಹಾಗೂ ವಿಮಾ ಸೌಲಭ್ಯಗಳು ಕೇವಲ ಮೂಲ ವೃತ್ತಿ ನಿರತರಿಗೆ ಮಾತ್ರ ತಲುಪಬೇಕು. ಆದರೆ, ಇಲಾಖೆಯ ಸಾಫ್ಟ್‌ವೇರ್‌ನಲ್ಲಿ ‘ಬ್ಯೂಟಿಷಿಯನ್’ ಎಂಬ ಪ್ರತ್ಯೇಕ ವಿಭಾಗವಿಲ್ಲದಿರುವುದು ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಅನರ್ಹರು ಸವಿತಾ ಸಮಾಜದ ಹೆಸರಿನಲ್ಲಿ ಸೌಲಭ್ಯಗಳನ್ನು ಪಡೆಯುವ ಸಾಧ್ಯತೆ ದಟ್ಟವಾಗಿದೆ. ಇದು ನಮ್ಮ ಬಡ ಕಾರ್ಮಿಕರ ಪಾಲಿನ ಅನ್ನವನ್ನು ಕಸಿದುಕೊಳ್ಳುವ ವ್ಯವಸ್ಥಿತ ಪಿತೂರಿಯಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
*ನಮ್ಮ ಆಗ್ರಹಗಳು*
ಕಾರ್ಮಿಕ ಇಲಾಖೆಯ ನೋಂದಣಿ ತಂತ್ರಾಂಶದಲ್ಲಿ ಕೂಡಲೇ ಬದಲಾವಣೆ ತಂದು, ಬ್ಯೂಟಿ ಪಾರ್ಲರ್ ಕೆಲಸದವರಿಗೆ ‘ಬ್ಯೂಟಿಷಿಯನ್’ ಎಂಬ ಪ್ರತ್ಯೇಕ ಹೆಸರಿನಲ್ಲಿ ಕಾರ್ಡ್ ನೀಡಬೇಕು.
ಸವಿತಾ ಸಮಾಜದ ಮೂಲ ವೃತ್ತಿ ಬಾಂಧವರಿಗೆ ಮಾತ್ರ ‘ಬಾರ್‌ಬರ್’ (ಕ್ಷೌರಿಕ) ಎಂಬ ಗುರುತು ಕಾಯ್ದಿರಿಸಬೇಕು.
ಈವರೆಗೆ ತಪ್ಪಾಗಿ ವಿತರಿಸಲಾಗಿರುವ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸಬೇಕು ಅಥವಾ ಸರಿಪಡಿಸಬೇಕು. ಈ ಕುರಿತು
“ಈಗಾಗಲೇ ಗದಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರು ಲಿಖಿತ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಮತ್ತು ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ಸವಿತಾ ಸಮಾಜದ ಅಸ್ಮಿತೆ ಮತ್ತು ಹಕ್ಕಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು,” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಜಿಲ್ಲಾ ಪದಾಧಿಕಾರಿಗಳು. ಸಮುದಾಯದ ಪ್ರಮುಖ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೃಷ್ಣಾ ಎಚ್. ಹಡಪದ
9845650612
ಸವಿತಾ ಸಮಾಜದ ಕುಲವೃತ್ತಿ ‘ಅಸ್ಮಿತೆ’ಗೆ ಧಕ್ಕೆ – ಅಸಂಘಟಿತ ಕಾರ್ಮಿಕ ಕಾರ್ಡ್‌ಗಳ ತಾಂತ್ರಿಕ ಲೋಪ ಸರಿಪಡಿಸಲು ಗದಗ ಜಿಲ್ಲಾ ಸವಿತಾ ಸಮಾಜದ ಆಗ್ರಹ
ಕರುನಾಡು ಘರ್ಜನೆ ಸುದ್ದಿ ಗದಗ 04: “ತಲತಲಾಂತರದಿಂದ ಸವಿತಾ ಸಮಾಜವು ನಂಬಿಕೊಂಡು ಬಂದಿರುವ ಪವಿತ್ರ ‘ಕ್ಷೌರಿಕ’ (‘ಬಾರ್‌ಬರ್’) ವೃತ್ತಿಯ ಹೆಸರನ್ನು ಅಸಂಘಟಿತ ಕಾರ್ಮಿಕ ಕಾರ್ಡ್‌ಗಳಲ್ಲಿ ಇತರೆ ವೃತ್ತಿ ನಿರತರಿಗೂ ಹಂಚುತ್ತಿರುವುದು ಸಮುದಾಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಈ ತಾಂತ್ರಿಕ ಲೋಪವನ್ನು ಕೂಡಲೇ ಸರಿಪಡಿಸದಿದ್ದರೆ…