ಕರುನಾಡು ಘರ್ಜನೆ ಸುದ್ದಿ ಚೆನ್ನೈ: ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಕಾರು ಚಾಲಕನ ಪುತ್ರನಿಗೆ ಅದೃಷ್ಟ ಖುಲಾಯಿಸಿದೆ. ಟಿವಿಕೆ ಅಭ್ಯರ್ಥಿಯಾಗಿ ವಿರುಗಂಬಕ್ಕಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಬರಿನಾಥನ್ ಈಗ ಗೆಲುವಿನ ಸನಿಹದತ್ತ ಸಾಗಿದ್ದಾರೆ.ದಳಪತಿ ವಿಜಯ್ ಅವರ ಆಪ್ತ ಸಹಾಯಕನಾಗಿ ನೇಮಕಗೊಳ್ಳುವುದಕ್ಕೆ ಮುನ್ನ ಹಲವು ವರ್ಷಗಳ ಕಾಲ ಕಾರು ಚಾಲಕನಾಗಿ ಕೆಲಸ ಮಾಡಿದ್ದ
ರಾಜೇಂದ್ರನ್ ಅವರ ಪುತ್ರ ಶಬರಿನಾಥನ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ವಿರುಗಂಬಕ್ಕಂ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಪ್ರಭಾಕರನ್ ರಾಜ್ ಅವರಿಗಿಂತ ಭಾರೀ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.ದಳಪತಿ ವಿಜಯ್ ಎಲ್ಲಾ 234 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದಾಗಲೇ ವಿರುಗಂಬಕ್ಕಂ ಕ್ಷೇತ್ರಕ್ಕೆ ಶಬರಿನಾಥನ್ ಹೆಸರು ಘೋಷಿಸಿದ್ದರು. ಈ ವೇಳೆ ಅಪ್ಪ – ಮಕ್ಕಳಿಬ್ಬರೂ ವೇದಿಕೆಯಲ್ಲೇ ವಿಜಯ್ ಅವರನ್ನ ಅಪ್ಪಿಕೊಂಡು ಕಣ್ಣೀರಿಟ್ಟಿದ್ದರು. ವಿಜಯ್ ಪಾದಗಳನ್ನ ಮುಟ್ಟಿ ಶಬರಿನಾಥನ್ ಭಾವುಕರಾಗಿದ್ದರು.