ಕರುನಾಡು ಘರ್ಜನೆ ಸುದ್ದಿ ಗದಗ 22: ಗದಗ ಜಿಲ್ಲೆಯ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯದಿಂದ ಸಾಂಪ್ರದಾಯಿಕ ಕುಸ್ತಿ ಕ್ರೀಡಾ ತರಬೇತಿಯನ್ನು ಹೊಸ ನಿಯಮಗಳ ನೆಪದಲ್ಲಿ ಮೊಟಕುಗೊಳಿಸುತ್ತಿರುವುದು ಹಾಗೂ ಕಳೆದ ಒಂದು ವರ್ಷದಿಂದ ತರಬೇತುದಾರರಿಲ್ಲದೆ ಮತ್ತು ವಸತಿ ನಿಲಯದ ವ್ಯವಸ್ಥೆ ಇಲ್ಲದೆ ಬಡ ಪ್ರತಿಭೆಗಳ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿರುವುದು ಕ್ರೀಡಾ ಇಲಾಖೆಯ ಮಲತಾಯಿ ಧೋರಣೆಯಾಗಿದೆ. ತಕ್ಷಣವೇ ಹಳೆಯ ವ್ಯವಸ್ಥೆಯನ್ನು ಯಥಾಸ್ಥಿತಿ ಮುಂದುವರಿಸಬೆಕೇಂದು ಪ್ರಮುಖ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ಸರ್ಕಾರಕ್ಕೆ ಮನವಿ ಮಾಡಿ ವಿನಂತಿಸಿದ್ದಾರೆ
ಈ ಕುರಿತು ಜಂಟಿ ಅಬಿಪ್ರಾಯ ವ್ಯಕ್ತಪಡಿಸಿರುವ ಗದಗ ಜಿಲ್ಲಾ ಕುಸ್ತಿಪಟುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ, ಗದಗ ಜಿಲ್ಲಾ ಭಾರತೀಯ ಶೈಲಿ ಕುಸ್ತಿ ಪೈಲ್ವಾನರ ಸಂಘದ ಅಧ್ಯಕ್ಷರಾದ ದೇವಪ್ಪ ಗಡೆದ ಹಾಗೂ ಕುಸ್ತಿ ಕ್ರೀಡಾ ನಿಲಯದ ಮಕ್ಕಳ ಪಾಲಕರು, ಗದಗ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ 5 ರಿಂದ 10ನೇ
ತರಗತಿಯವರೆಗಿನ ಎಲ್ಲಾ ವರ್ಗದ ಬಡ ವಿದ್ಯಾರ್ಥಿ ಮಕ್ಕಳಿಗೆ ಕುಸ್ತಿ ತರಬೇತಿ ಮತ್ತು ವಸತಿ ನಿಲಯದ ಅತ್ಯುತ್ತಮ ವ್ಯವಸ್ಥೆ ಇತ್ತು. ಆದರೆ ಈಗ ಇಲಾಖೆಯು ‘ಬುನಾದಿ ತರಬೇತಿ’ ಎಂಬ ಹೊಸ ನಿಯಮವನ್ನು ತಂದು ತರಬೇತಿಯನ್ನು ಕೇವಲ 5 ರಿಂದ 7ನೇ ತರಗತಿಗೆ ಕಡ್ಡಾಯಗೊಳಿಸಿ ಸೀಮಿತಗೊಳಿಸಲು ಹೊರಟಿದ್ದು ಅತ್ಯಂತ ನೋವಿನ ಸಂಗತಿ ಕುಸ್ತಿ ಎಂಬುದು ದೈಹಿಕ ಮತ್ತು ಮಾನಸಿಕ ಪರಿಪಕ್ವತೆ ಬೇಡುವ ಕ್ರೀಡೆ. 8, 9 ಮತ್ತು 10ನೇ ತರಗತಿಯ ಹಂತದಲ್ಲಿಯೇ ಮಕ್ಕಳಿಗೆ ಸೂಕ್ತ ತರಬೇತಿ ಸಿಗದೇ ಹೋದರೆ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಹೇಗೆ ಸಾಧ್ಯ? ಇಲಾಖೆಯ ಈ ಅವೈಜ್ಞಾನಿಕ ಕಾಯ್ದೆಯಿಂದಾಗಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಹೊತ್ತಿರುವ 5ರಿಂದ 10ನೇ ತರಗತಿಯವರೆಗಿನ ಎಲ್ಲಾ ವರ್ಗಗಳ ನೂರಾರು ಬಡ ಕುಸ್ತಿಪಟುಗಳು ವಂಚಿತರಾಗುತ್ತಿದ್ದಾರೆ.
ಗದಗಿನ ಧೀಮಂತ ನಾಯಕರಾದ ಮಾನ್ಯ ಎಚ್.ಕೆ. ಪಾಟೀಲ್ ಸಾಹೇಬರ ಮುತುವರ್ಜಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದ ಸುಸಜ್ಜಿತವಾದ ಕುಸ್ತಿ ಮನೆ (ಅಖಾಡ) ಮತ್ತು ಕ್ರೀಡಾ ಪರಿಕರಗಳು ಲಭ್ಯವಿದ್ದರೂ, ಕಳೆದ ಸುಮಾರು ಒಂದು ವರ್ಷದಿಂದ ಇಲ್ಲಿ ಕುಸ್ತಿ ತರಬೇತುದಾರರೇ (ಕೋಚರ್) ಇಲ್ಲದಿರುವುದು ಇಲಾಖೆಯ ಬೇಜವಾಬ್ದಾರಿ ನೀತಿಗೆ ಹಿಡಿದ ಕನ್ನಡಿಯಾಗಿದ್ದು ಅತ್ಯಂತ ಬೇಸರದ ಸಂಗತಿ ಎಂದು ಹೇಳಿದರು.
*ಅಂತರರಾಷ್ಟ್ರೀಯ ಸಾಧಕರ ಇತಿಹಾಸ ಮರೆಯಬೇಡಿ:*
ಇದೇ ಗದಗ ಕ್ರೀಡಾ ವಸತಿ ನಿಲಯದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್ ಕಂಚು ಮತ್ತು ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತೆ, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಕು. ಪ್ರೇಮಾ ಹುಚ್ಚಣ್ಣವರ, ರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಹಾಗೂ ಕರ್ನಾಟಕ ಕೇಸರಿ ಕು. ಶಾರದಾ ಬೇಲೇರಿ, ಕರ್ನಾಟಕ ಕುಮಾರ್ ಪ್ರಶಸ್ತಿ ವಿಜೇತ ಕು. ಪಾಲಾಕ್ಷಗೌಡ ಬೇಲೇರಿ, ರಾಷ್ಟ್ರೀಯ ಪದಕ ವಿಜೇತರಾದ ಕು. ಪ್ರಥಮಗೌಡ ಬೇಲೇರಿ ಹಾಗೂ ಕು. ಅನಿಲ್ ದರ್ವೇಷಿ ಅವರಂತಹ ಮಹಾನ್ ಜಗಜಟ್ಟಿಗಳು ದೇಶದ ನಕಾಶೆಯಲ್ಲಿ ಗದಗ ಜಿಲ್ಲೆಯ ಹೆಸರನ್ನು ಗುರುತಿಸುವಂತೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳಾದ ಸಿ.ಎನ್. ಶ್ರೀಧರ ಸರ್ ಅವರು ಕೂಡ ಈ ಗಂಭೀರ ಪರಿಸ್ಥಿತಿಯನ್ನು ಅರಿತು ಕುಸ್ತಿ ವಿಭಾಗವನ್ನು ಮುಂದುವರಿಸಲು ಕ್ರೀಡಾ ಇಲಾಖೆಯ ಆಯುಕ್ತರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಜಿಲ್ಲಾಡಳಿತದ ಪತ್ರಕ್ಕೂ ಬೆಲೆ ನೀಡದ ಕ್ರೀಡಾ ಇಲಾಖೆಯ ನೀತಿ ಸರಿಯಲ್ಲ” ಎಂದು ಕೃಷ್ಣಾ ಎಚ್. ಹಡಪದ ಅವರು ಹೇಳಿದರು.
ಗದಗ ಜಿಲ್ಲೆಯ ಹಿರಿಯ ಪೈಲ್ವಾನರು ಹಾಗೂ ಗಣ್ಯರಾದ ಲಕ್ಕುಂಡಿಯ ಮಾಜಿ ಪೈಲ್ವಾನ್ ರಮೇಶ ಬಾವಿ, ಹಾತಲಗೇರಿಯ ಮಾಜಿ ಪೈಲ್ವಾನ್ ಸೋಮಪ್ಪ ಮೇಲ್ಮನಿ, ಬಾಲೆ ಸಾಬ್ ನದಾಫ, ಪರಶುರಾಮ ಹಟ್ಟಿ, ಮಾಂತೇಶ್ ಗುಂಜಾಳ, ರವಿ ವಾಲ್ಮೀಕಿ, ಮಾಬುಸಾಬ ಹರಿವಾಣ, ಬಸವರಾಜ ಹಾತಲಗೇರಿ, ಜಗದೀಶ್ ಆಡವಿಸೋಲ್ಲಾಪುರ, ದೇವಪ್ಪ ವಾಲ್ಮೀಕಿ, ಪುಂಡಲಿಕ ಹಾತಲಗೇರಿ ಹಾಗೂ ಗದಗಿನ ಈರಣ್ಣ ಇಮ್ಮಡಿಯವರ್ ಸೇರಿದಂತೆ ನೂರಾರು ಪಾಲಕರು ಮತ್ತು ಕುಸ್ತಿ ಅಭಿಮಾನಿಗಳು ಉಪಸ್ಥಿತರಿದ್ದು, “ಮಾನ್ಯ ಸಚಿವರಾದ ಎಚ್.ಕೆ. ಪಾಟೀಲ್ ಸಾಹೇಬರು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಈ ಹಿಂದೆ ಇದ್ದಂತೆ 5 ರಿಂದ 10ನೇ ತರಗತಿಯವರೆಗಿನ ಕುಸ್ತಿ ತರಬೇತಿ ವ್ಯವಸ್ಥೆಯನ್ನು ಯಥಾಸ್ಥಿತಿ ಮುಂದುವರಿಸಬೇಕು ಮತ್ತು ತಕ್ಷಣವೇ ಅನುಭವಿ ತರಬೇತುದಾರರನ್ನು ನೇಮಿಸಬೇಕು. ಎಂದು ಮನವಿ ಮಾಡಿ ಒತ್ತಾಯಿಸಿದ್ದಾರೆ.
ಬುನಾದಿ ಕಾಯ್ದೆ ಕೈಬಿಟ್ಟು, ಕ್ರೀಡಾ ವಸತಿ ನಿಲಯದಲ್ಲಿ ಹಳೆಯ ಕುಸ್ತಿ ವ್ಯವಸ್ಥೆಯನ್ನೇ ಮುಂದುವರಿಸಲು ಕೃಷ್ಣಾ ಹಡಪದ ಮನವಿ
ಕರುನಾಡು ಘರ್ಜನೆ ಸುದ್ದಿ ಗದಗ 22: ಗದಗ ಜಿಲ್ಲೆಯ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯದಿಂದ ಸಾಂಪ್ರದಾಯಿಕ ಕುಸ್ತಿ ಕ್ರೀಡಾ ತರಬೇತಿಯನ್ನು ಹೊಸ ನಿಯಮಗಳ ನೆಪದಲ್ಲಿ ಮೊಟಕುಗೊಳಿಸುತ್ತಿರುವುದು ಹಾಗೂ ಕಳೆದ ಒಂದು ವರ್ಷದಿಂದ ತರಬೇತುದಾರರಿಲ್ಲದೆ ಮತ್ತು ವಸತಿ ನಿಲಯದ ವ್ಯವಸ್ಥೆ…