ಕರುನಾಡು ಘರ್ಜನೆ ಸುದ್ದಿ ನರೇಗಲ್ಲ: ಆಧುನಿಕ ಯುಗದಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ನಿಡಗುಂದಿ ಕೊಪ್ಪ ಗ್ರಾಮದ ನವೋದಯ ಯುವಕ ಮಂಡಳದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ, ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ, ಗಣೇಶ ಚತುರ್ಥಿ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಇಂತಹ ಶೈಕ್ಷಣಿಕ ಹಾಗೂ ಪ್ರತಿಭಾ ಉತ್ತೇಜನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೊರತರುವ ಕಾರ್ಯ ನಡೆಯಬೇಕು. ನವೋದಯ ಯುವಕ ಮಂಡಳ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಹಿರಿಯರಾದ ಎಂ.ಎಂ. ಸರ್ವಿ ಗುರುಗಳು ಮಾತನಾಡಿ, ನವೋದಯ ಯುವಕ ಮಂಡಳವು ಹಲವು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯಕ್ರಮಗಳು ಅತ್ಯಂತ ಅವಶ್ಯಕವಾಗಿದ್ದು, ಚಿಕ್ಕ ಗ್ರಾಮವಾದ ನಿಡಗುಂದಿ ಕೊಪ್ಪದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರಾದ ಭೀಮಪ್ಪ ಬೂದಿಹಾಳ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹುಚ್ಚಿರಪ್ಪ ಸವಿ ಅವರನ್ನು ಸನ್ಮಾನಿಸಲಾಯಿತು.
ವೇದಮೂರ್ತಿ ಶ್ರೀ ಶೇಖರಯ್ಯ ಹಿರೇಮಠ ಅವರು ಮಾತನಾಡಿ, ದೇಶದ ಸುಭದ್ರತೆ ಹಾಗೂ ರಕ್ಷಣೆಯಲ್ಲಿ ಖಾವಿ ಮತ್ತು ಖಾಕಿ ವಹಿಸುವ ಮಹತ್ವದ ಪಾತ್ರದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರವೀರಪ್ಪ ಮ. ಸವಿ, ಶೇಖರಪ್ಪ ಸೂಡಿ, ಮುದಿಯಪ್ಪ ಸರ್ವಿ, ಬಸವರಾಜ ಬನಿಗೋಳ, ಪುಲಕೇಶಿಪ್ಪ ಸರ್ವಿ, ಶರಣಪ್ಪ ಬೆಲ್ಲದ, ಬಸಲಿಂಗಪ್ಪ ಸರ್ವಿ, ರಮೇಶ್ ಮಾಸ್ತಿ, ಶರಣಪ್ಪ ಅವಾರಿ, ಶರಣಪ್ಪ ಬಾಲಣ್ಣನವರ, ಶರಣಪ್ಪ ಖವಾಸ್ತೆ, ವೀರಯ್ಯ ಹಿರೇಮಠ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಹೇಶ ಮೇಟಿ, ವರದಿಗಾರ