ಕರುನಾಡು ಘರ್ಜನೆ ಸುದ್ದಿ ಗದಗ, ಅ.13: ಗದಗ ನಗರದ ಗಂಗಾಪುರ ಪೇಟೆಯ ನಿವಾಸಿ ಕುಮಾರಿ ವರ್ಷಾ ನೀಲಗುಂದ ಅವರ ಲಿವರ್ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಬುದ್ಧಪ್ರಿಯ ಜಾನಪದ ಹಾಗೂ ಸಾಂಸ್ಕೃತಿಕ ಕಲಾ ತಂಡ (ಎಸ್‌ಸಿ), ಮ್ಯಾಗೇರಿ ಓಣಿ, ಗದಗ ವತಿಯಿಂದ ಅ.10ರಂದು ಗದಗದ ಶ್ರೀ ತೋಂಟದಾರ್ಯ ಮಠದ ಆವರಣದಲ್ಲಿ ಮಾನವೀಯ ಸೇವಾ ಮನೋಭಾವದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕುಮಾರಿ ವರ್ಷಾ ನೀಲಗುಂದ ಅವರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಅವರ ಕುಟುಂಬಕ್ಕೆ ನೀಡಲು ತಂಡದ ಅಧ್ಯಕ್ಷರಾದ ಚಿದಾನಂದ ಅನವಾಳ ಅವರು ಮುಂದಾಗಿದ್ದರು. ಕಲೆಯ ಮೂಲಕ ಸಮಾಜ ಸೇವೆ ಮಾಡುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಅನೇಕ ಕಲಾವಿದರು ಹಾಗೂ ಸಾರ್ವಜನಿಕರು ಸಹಕಾರ ನೀಡಿದ್ದರು.
ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಕುಮಾರಿ ವರ್ಷಾ ನೀಲಗುಂದ ಅವರು ನಿಧನರಾದ ದುಃಖದ ಸುದ್ದಿ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ರದ್ದುಗೊಳಿಸಲಾಯಿತು. ನೆರವು ನೀಡುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲೇ ಇಂತಹ ದುಃಖದ ಸುದ್ದಿ ಬಂದಿರುವುದು ಕಲಾವಿದರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ತೀವ್ರ ನೋವು ಮತ್ತು ಬೇಸರ ಮೂಡಿಸಿತು.
ಈ ಸಂದರ್ಭದಲ್ಲಿ ಕಲಾವಿದರಾದ ಶ್ರೀ ಗೌಡಪ್ಪ ಬೊಮ್ಮಪ್ಪನವರ್, ಶ್ರೀ ಮಂಜುನಾಥ, ಶ್ರೀಮತಿ ಅನುಸೋಯ ಬೊಮ್ಮಣ್ಣವರ್, ಶ್ರೀ ಶಿವು ಭಜಂತ್ರಿ, ಬಸವರಾಜ ಈರಣ್ಣವರ್, ಅಶೋಕ ಹಾದಿಮನಿ, ಮುತ್ತು ಯಲ್ಲಕ್ಕನವರು, ಸಿದ್ದಣ್ಣ ಹಾದಿಮನಿ, ಮಂಜುನಾಥ ಹಾದಿಮನಿಬಾದಲ್ ಪಿ ನವಲೇಕರ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು.
ಇದೇ ವೇಳೆ ಕರುನಾಡು ಘರ್ಜನೆ ಪತ್ರಿಕೆಯ ಸಂಪಾದಕರಾದ ಎಸ್.ಎಂ. ಕಾತರಕಿ ಅವರು ಕೂಡ ಮಾನವೀಯತೆಯ ದೃಷ್ಟಿಯಿಂದ ಕುಟುಂಬಕ್ಕೆ ಧನಸಹಾಯ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನೇಕ ಕಲಾವಿದರು ತಮ್ಮ ಕೈಲಾದ ನೆರವನ್ನು ನೀಡುವ ಮೂಲಕ ಮಾನವೀಯತೆ ಮೆರೆದರು.
ವರ್ಷಾ ನೀಲಗುಂದ ಅವರ ನಿಧನಕ್ಕೆ ಬುದ್ಧಪ್ರಿಯ ಜಾನಪದ ಹಾಗೂ ಸಾಂಸ್ಕೃತಿಕ ಕಲಾ ತಂಡದ ಪದಾಧಿಕಾರಿಗಳು, ಕಲಾವಿದರು ಹಾಗೂ ಕರುನಾಡು ಘರ್ಜನೆ ಪತ್ರಿಕೆಯ ವತಿಯಿಂದ ಸಂತಾಪ ಸೂಚಿಸಲಾಯಿತು. ಚಿಕಿತ್ಸೆಗೆ ನೆರವಾಗಲು ಆಯೋಜಿಸಿದ್ದ ಕಾರ್ಯಕ್ರಮವು ದುಃಖದ ಸುದ್ದಿಯಿಂದ ಸ್ಥಗಿತಗೊಂಡರೂ, ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೆ ನಿಲ್ಲುವ ಮಾನವೀಯ ಪ್ರಯತ್ನ ಎಲ್ಲರ ಗಮನ ಸೆಳೆಯಿತು.