ಕರುನಾಡು ಘರ್ಜನೆ ಸುದ್ದಿ ಗದಗ 01: ಸವಿತಾ ಸಮುದಾಯದವರು ಅನಾದಿ ಕಾಲದಿಂದಲೂ ಧಾರ್ವಿುಕ, ಸಾಂಪ್ರದಾಯಿಕವಾಗಿ ನಾಟಿ ವೈದ್ಯ, ಕ್ಷೌರಿಕ ಹಾಗೂ ನಾದಸ್ವರ-ಡೋಲು ಬಾರಿಸುವುದು ಮುಂತಾದ 12 ಪ್ರಮುಖ ವೃತ್ತಿಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ. ವೇದ- ಉಪನಿಷತ್ ಕಾಲದಿಂದಲೂ ನಮ್ಮ ವೃತ್ತಿಗೆ ಗೌರವವಿದ್ದು, ರಾಜ-ಮಹಾರಾಜರ ಕಾಲದಲ್ಲಿ ಯಾವುದೇ ಆಸ್ತಿಗಳನ್ನು (ಭೂಮಿ) ಪಡೆಯದೇ ಅಕ್ಕಿ-ಬೇಳೆ ಇತ್ಯಾದಿ ಆಹಾರ ಧಾನ್ಯ ಪಡೆದು ಸೇವಾ ವೃತ್ತಿಗಳನ್ನು ಮಾಡುತ್ತಾ ಬಂದಿದ್ದೇವೆ.
ಆದರೆ, ದೇಶಕ್ಕೆ ಬ್ರಿಟಿಷರು ಕಾಲಿಟ್ಟ ನಂತರ ನಾಟಿ ವೈದ್ಯ ಪದ್ಧತಿ ಬದಲು ಇಂಗ್ಲಿಷ್ ವೈದ್ಯಕೀಯ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ನಾಟಿ ವೈದ್ಯಕೀಯ ಪದ್ಧತಿಯನ್ನು ಬುಡಸಮೇತ ಕಿತ್ತುಹಾಕಲಾಗುತ್ತಿದೆ. ಕ್ಷೌರಿಕ ವೃತ್ತಿಯಲ್ಲಿ ಎಲ್ಲರ ತಲೆಯನ್ನೂ ಮುಟ್ಟುತ್ತೇವೆ. ಆದರೂ, ನಮ್ಮನ್ನು ಮಾತ್ರ ಅಸ್ಪಶ್ಯರಂತೆ ಕಾಣಲಾಗುತ್ತಿದೆ. ನಮ್ಮನ್ನು ನೆನೆಯಲೂ ಬಾರದು, ಕಣ್ಣಿಗೂ ಕಾಣಿಸಬಾರದು ಎಂಬ ರೀತಿಯಲ್ಲಿ ನೋಡಲಾಗುತ್ತಿದೆ
ವರ್ಗಗಳ ಸಂಕೋಲೆಯಲ್ಲಿ ಪರದಾಟ
—————
ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ವರ್ಗದ ಜನರಿಗೆ ಮಾತ್ರ ಕ್ಷೌರ ಮಾಡಿ ಎಂದು ಹೇಳುತ್ತಾರೆ. ಮತ್ತೊಂದೆಡೆ ಸರ್ಕಾರ ಎಸ್ಸಿ, ಎಸ್ಟಿ ಸೇರಿ ಎಲ್ಲ ವರ್ಗದವರಿಗೂ ಸಮಾನ ಗೌರವದ ಆಧಾರದಲ್ಲಿ ಕ್ಷೌರ ಮಾಡಲು ತಿಳಿಸುತ್ತದೆ. ಈ ಎರಡೂ ವರ್ಗದವರ ನಡುವೆ ಸವಿತಾ ಸಮಾಜ ಫಜೀತಿ ಎದುರಿಸುತ್ತಿದೆ. ಕೆಲವರು ಊರು ತೊರೆದು ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ಜಾತಿನಿಂದನೆ ಪದಗಳನ್ನು ಕೇಳಲಾರದೆ ವೃತ್ತಿ ತೊರೆಯುತ್ತಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ದೇವರ ಮೂರ್ತಿ ಕೆತ್ತನೆ ಮಾಡಿದರೆ, ಸವಿತಾ ಸಮಾಜದವರು ಮಾನವರನ್ನು ಮೂರ್ತಿಯನ್ನಾಗಿ ಮಾಡುತ್ತೇವೆ. ಆದರೆ, ಯಾವುದೇ ಕಾರ್ಯಕ್ಕೆ ಹೋಗುವಾಗ ನಮ್ಮನ್ನು ಅಪಶಕುನದಂತೆ ಕಾಣುತ್ತಾರೆ. ಕೆಲವೆಡೆ ಮನೆಗೆ ಕ್ಷೌರ ಮಾಡಲು ಹೋದರೂ ಅಸ್ಪಶ್ಯರಂತೆ ಕಾಣಲಾಗುತ್ತದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ (ಬುದೂರ) ತಮ್ಮ ಕಾಯಕ ಸವಿತಾ ಸಮಾಜ ಅನುಭವಿಸುತ್ತಿರುವ ಕಷ್ಟದ ಗಳಿಗೆಯ ಕುರಿತು ಅಳಲು ತೊಡಿಕೊಂಡಿದ್ದಾರೆ
100 ಕೋಟಿ ರೂ. ಅನುದಾನ ಕೊಡಿ
——————
ರಾಜ್ಯದಲ್ಲಿ ಅಂದಾಜು 20 ಲಕ್ಷ ಜನಸಂಖ್ಯೆ ಇರುವ ಸವಿತಾ ಸಮುದಾಯಕ್ಕೆ ರಾಜಕೀಯ ಪ್ರತಿನಿಧಿಗಳೇ ಇಲ್ಲ. ಲೋಕಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕೋವಿಡ್ನಿಂದಾಗಿ ಮೃತರಾದರು. ಸರ್ಕಾರ ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ಹಿಂದೆ 2 ಕೋಟಿ ರೂ. ಕೊಟ್ಟಿತ್ತು. 2021-22ನೇ ಸಾಲಿನಲ್ಲಿ ನಿಗಮಕ್ಕೆ 5 ಕೋಟಿ ರೂ. ಹಂಚಿಕೆ ಮಾಡಿದ್ದು, ಈವರೆಗೆ 1.5 ಕೋಟಿ ರೂ. ಮಾತ್ರ ಬಿಡುಗಡೆ ಆಗಿದೆ. ಸರ್ಕಾರ ಕನಿಷ್ಠ 100 ಕೋಟಿ ರೂ. ವಾರ್ಷಿಕ ಅನುದಾನ ಕೊಟ್ಟಲ್ಲಿ ಅನುಕೂಲವಾಗಲಿದೆ.
ಸವಿತಾ ಮಹರ್ಷಿ ಹಿನ್ನೆಲೆ
—————
ಕ್ಷೌರಿಕ ಸಮಾಜದ ಮೂಲಪುರುಷರಾದ ಸವಿತಾ ಮಹರ್ಷಿ ದೇವದೇವತೆಗಳ ಆಯುಷ್ಕರ್ಮ ಸೇವೆ ಯನ್ನು ಮಾಡುತ್ತಿದ್ದರೆಂದು ಕಾಶಿ ಕ್ಷೇತ್ರ್ರಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಶಿವನ ದಿವ್ಯದೃಷ್ಟಿಯಲ್ಲಿ ಜನ್ಮತಾಳಿದ ಅವರು ಬ್ರಹ್ಮಜ್ಞಾನ ಹೊಂದಿದ್ದು, ಚತುರ್ವೆದಗಳಲ್ಲಿ ಒಂದಾದ ಸಾಮ ವೇದವನ್ನು ಬರೆದಿದ್ದಾರೆ. ಅಲ್ಲದೆ, ದೇವತೆಗಳ ಜತೆಗೆ ತಪಸ್ಸು ಮಾಡುತ್ತಿದ್ದರು ಎಂಬ ಹಿತಿಹಾಸವಿದೆ.
ಸವಿತಾ ಮಹರ್ಷಿಯ ಪುತ್ರಿಯಾಗಿರುವ ಗಾಯತ್ರಿ ದೇವಿಯ ಮಂತ್ರಗಳಲ್ಲಿ ಸವಿತೃ ಎಂಬ ಪದವು ಉಲ್ಲೇಖವಾಗಿದೆ. ಪ್ರತಿವರ್ಷ ಸರ್ಕಾರದ ವತಿಯಿಂದ ‘ರಥಸಪ್ತಮಿ ದಿನ’ದಂದು ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರಕೂಟ, ವಿಜಯನಗರ, ಕಲ್ಯಾಣ ಚಾಲ್ಯುಕರ ಶಾಸನಗಳಲ್ಲಿ ಸವಿತಾ ಸಮಾಜದ ಬಗ್ಗೆ ಉಲ್ಲೇಖವಿದೆ. ಅನೇಕ ಶಾಸನಗಳ ಮೇಲೆ ಸವಿತಾ ಸಮಾಜದ ಸಾಧನಗಳಾದ ಕತ್ತಿ, ಕನ್ನಡಿ, ಕತ್ತರಿಗಳನ್ನು ಕೆತ್ತಲಾಗಿದೆ. ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸವಿತಾ ಸಮಾಜ ತನ್ನ ಸೇವಾಕಾರ್ಯದಿಂದ ಹೆಸರುವಾಸಿಯಾಗಿದೆ.
ಜಾತಿನಿಂದನೆಗೆ ಶಿಕ್ಷೆಯಾಗಲಿ
—————
ಸವಿತಾ ಸಮುದಾಯದಲ್ಲಿ ನಾಯಿಂದ, ಪರಿಯಾಳ, ಅಂಬಟ್ಟನ್ ಭಜಂತ್ರಿ, ಭಂಡಾರಿ, ಚೌರಿಯ, ಹಡಪದ, ಕವುಟಿನ್ ಕೆಲಸಿ, ಕ್ಷೌರಿಕ, ಕ್ಷೌರದ್, ಮಹಾಲೆ, ಮಂಗಳ, ಮೇಲಗಾರ, ನಾಡಿಗ್, ನಾಪಿತ, ನವಲಿಗ, ನಾವಿ, ನಯನಜ, ಕ್ಷತ್ರಿಯ, ನ್ಹಾವಿ, ವಾಜಂತ್ರಿ, ಸವಿತಾ, ನಯನಜ ಕ್ಷತ್ರಿ ಸೇರಿ 26 ಉಪ ಪಂಗಡಗಳಿವೆ. 1947ರಿಂದ ಕ್ಷೌರಿಕ ಸಮುದಾಯದ ಸಂಘಟನೆ ಮಾಡಿಕೊಂಡು ಬಂದು, ಸುದೀರ್ಘ ಹೋರಾಟದ ಫಲವಾಗಿ 2019ರ ಏ.24 ರಂದು ‘ಹಜಾಮ’ ಪದಬಳಕೆಯನ್ನು ಜಾತಿನಿಂದನೆ ಎಂದು ಪರಿಗಣಿಸಿ ಆದೇಶಿಸಲಾಗಿದೆ. ಆದರೆ, ಈಗಲೂ ಈ ಶಬ್ದವನ್ನು ಬಳಕೆ ಮಾಡುತ್ತಿದ್ದು, ಅಂತಹವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು.
ಬಂಡವಾಳಶಾಹಿಗಳಿಗೆ ವೃತ್ತಿ ಪರವಾನಗಿ ಬೇಡ
—————
ಸಂವಿಧಾನದ ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ವೃತ್ತಿಯನ್ನು ಮಾಡಬಹುದು. ಆದರೆ, ವೃತ್ತಿಯೇ ಗೊತ್ತಿಲ್ಲದ ಇತರೆ ಸಮುದಾಯದ ಜನರು ಹಣ ತೊಡಗಿಸಿ ಕಟಿಂಗ್ ಸಲೂನ್ ತೆರೆಯುತ್ತಿದ್ದಾರೆ. ಈ ಸಲೂನ್ಗಳಲ್ಲಿ ಸವಿತಾ ಸಮುದಾಯದ ಜನರನ್ನೇ ದುಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ವೃತ್ತಿಯೇ ಗೊತ್ತಿರದವರನ್ನು ಸಲೂನ್ಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಈಗಂತೂ ಅನೇಕ ಖಾಸಗಿ ಕಂಪನಿಗಳು ಮನೆಗೆ ಹೋಗಿ ಕಟಿಂಗ್ ಮಾಡುವ ಸೇವೆ ಒದಗಿಸುತ್ತಿವೆ. ಈ ಮೂಲಕ ನಮ್ಮ ಕ್ಷೌರಿಕ ವೃತ್ತಿಗೆ ಆಪತ್ತು ತರುತ್ತಿದ್ದಾರೆ. ವೃತ್ತಿ ಕಲಿತವರಿಗೆ ಮಾತ್ರ ಸರ್ಕಾರ ಸಲೂನ್ ತೆರೆಯಲು ಪರವಾನಗಿ ನೀಡಬೇಕು.
ಪ್ರಮುಖ ಬೇಡಿಕೆಗಳು
—————
1) ನಾದಸ್ವರ-ಡೋಲು ಬಾರಿಸುವವರು, ಕ್ಷೌರಿಕರು ಸಂಚರಿಸಲು ಉಚಿತ ಬಸ್ಪಾಸ್ ನಿಡಬೇಕು
2) ಗದಗ ಸೇರಿ ರಾಜ್ಯದ 4 ವಿಭಾಗಗಳಲ್ಲಿ ಕ್ಷೌರಿಕ ತರಬೇತಿ ಕೇಂದ್ರ ಆರಂಭಿಸಬೇಕು.
3) ಜಿಲ್ಲಾವಾರು ಸಮುದಾಯ ಭವನ ನಿರ್ವಿುಸಬೇಕು.
4) ರಾಜ್ಯದ ವಿವಿಧೆಡೆ ವಾದ್ಯ ನುಡಿಸುವ ತರಬೇತಿ ಕೇಂದ್ರ ಆರಂಭಿಸಬೇಕು.
5) 50 ವರ್ಷದ ನಂತರದ ಕ್ಷೌರಿಕರನ್ನು ಹಿರಿಯ ಕ್ಷೌರಿಕನೇಂದು ಪರಿಗಣಿಸಿ ತಿಂಗಳಿಗೆ 8000.ರೂ ಮಾಸಾಶನ ನೀಡಬೇಕು.
6) ಸವಿತಾ ಮಹರ್ಷಿ ಜಯಂತಿ ವೇಳೆ ‘ಸವಿತಾ ರತ್ನ ಪ್ರಶಸ್ತಿ’ ನೀಡಬೇಕು.
7) ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ, ಇಲ್ಲವೇ ಹಿಂದುಳಿದ ವರ್ಗದ (2ಎ)ಲ್ಲಿ ಸವಿತಾ ಸಮಾಜಕ್ಕೆ ಪ್ರವರ್ಗದಡಿ ಶೇ.8 ಉಪ ಮೀಸಲಾತಿ ಕಲ್ಪಿಸಬೇಕು
8) ಕ್ಷೌರಿಕ ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲೆಗೊಂದು ಹಾಸ್ಟೆಲ್ ತೆರೆಯಬೇಕು, ಮತ್ತು ಶೈಕ್ಷಣಿಕ ಸಾಲ ಕೊಡಬೇಕು.
9) ಎಲ್ಲ ಕ್ಷೌರಿಕರು, ನಾದಸ್ವರ-ಡೋಲು ಬಾರಿಸುವವರಿಗೆ ಆರೋಗ್ಯ ವಿಮೆ ಕಲ್ಪಿಸಬೇಕು.
10) ದೊಡ್ಡ ಮಟ್ಟದ ಸಲೂನ್ಗಳನ್ನು ನಿರ್ವಿುಸಲು ಸಹಾಯಧನ ಹಾಗೂ ಶೂನ್ಯ ಬಡ್ಡಿದರದ ಸಾಲ ನೀಡಬೇಕು.
11) ನಗರದಲ್ಲಿ ಮತ್ತು ಗ್ರಾಮಗಳಲ್ಲಿ ಅತ್ಶಂತ ಬಡ ಕ್ಷೌರಿಕರಿಗೆ ಕ್ಷೌರ ಕುಟೀರ ಆರಂಭಿಸಬೇಕು